ರಾಜ್ಯ

'ಕುಂಬಾರ ವೀರಭದ್ರಪ್ಪ'ಗೆ ಬಿಎಂಆರ್ ಸಿಎಲ್ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ; ಸಮಾರಂಭದಲ್ಲಿ ಮಾಸ್ಕ್ ಮರೆತ ಗಣ್ಯರು!

Nagaraja AB

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಬಿಎಂಆರ್ ಸಿಎಲ್ ಕನ್ನಡ ಸಂಘದ  ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ 'ನಮ್ಮ ಮೆಟ್ರೋ  ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಕನ್ನಡದ ಖ್ಯಾತ ಕಾದಂಬರಿಕಾರ ಕುಂಬಾರ ವೀರಭದ್ರಪ್ಪ ಅವರಿಗೆ ನೀಡಲಾಗಿದೆ. 

 ಬಿಎಂಆರ್ ಸಿಎಲ್ ಮಾಧ್ಯಮಗಳಿಗೆ ಈ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದೆ. ಆದರೆ,  ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೆಲವರನ್ನು ಬಿಟ್ಟರೆ,  ವೇದಿಕೆ ಮೇಲಿದ್ದ ಬಹುತೇಕ  ಮೆಟ್ರೋ ಅಧಿಕಾರಿಗಳು  ಮಾಸ್ಕ್ ಧರಿಸಿಲ್ಲ.

ಬೈಯಪ್ಪನಹಳ್ಳಿ ಡಿಪೋದಲ್ಲಿ ನಡೆದ 66ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ, ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಉದ್ಘಾಟಿಸಿದ್ದಾಗಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಮಾಸ್ಕ್ ಧರಿಸದ ಯಾವುದೇ ಪ್ರಯಾಣಿಕರನ್ನು ಮೆಟ್ರೋ ನಿಲ್ದಾಣ ಅಥವಾ ರೈಲುಗಳನ್ನು ಸಂಚರಿಸಲು ಅವಕಾಶ ನೀಡುವುದಿಲ್ಲ. ಅಲ್ಲದೇ, ಮಾಸ್ಕ್ ಧರಿಸದೆ ಇರುವವರಿಂದ ಸುಮಾರು 76 ಲಕ್ಷದಷ್ಟು ದಂಡವನ್ನು ಸಂಗ್ರಹಿಸಲಾಗಿದೆ. ಅಂತಹುದರಲ್ಲಿ ಬಿಎಂಆರ್ ಸಿಎಲ್  ವ್ಯವಸ್ಥಾಪಕ ಅಂಜುಂ ಪರ್ವೇಜ್ ಒಳಗೊಂಡಂತೆ ಅನೇಕ ಮಂದಿ ಮಾಸ್ಕ್ ಧರಿಸದೆ ಇರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ. 

ರೈಲು ನಿಲ್ದಾಣ, ಸಮಾರಂಭಗಳಲ್ಲಿ ಕನ್ನಡ ನಾಮಫಲಕ ಅಥವಾ ಬ್ಯಾನರ್ ಬಳಸದೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಬಿಎಂಆರ್ ಸಿಎಲ್ ಇದೀಗ ಕನ್ನಡ ಭಾಷೆಗೆ ಮಹತ್ವ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರಾಜ್ಯೋತ್ಸವ ದಿನದಂದು ಐದು ನಿಲ್ದಾಣಗಳ ಹೊರಗಡೆ ಕನ್ನಡ ಗೀತೆಗಳ ಗಾಯನ, ಡೊಳ್ಳು ಕುಣಿತ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. 

SCROLL FOR NEXT