ರಾಜ್ಯ

ಇನ್ನೂ ಮುಂದೆ ಮೆಟ್ರೋ ಪ್ರಯಾಣಿಕರು ಆನ್‌ಲೈನ್ ನಲ್ಲಿ ಸ್ಮಾರ್ಟ್ ಕಾರ್ಡ್ ರೀಚಾರ್ಜ್‌ ಮಾಡಿದ ನಂತರ 1 ಗಂಟೆ ಕಾಯಬೇಕಾಗಿಲ್ಲ

Lingaraj Badiger

ಬೆಂಗಳೂರು: ಇನ್ನೂ ಮುಂದೆ ಮೆಟ್ರೋ ಪ್ರಯಾಣಿಕರು ಆನ್ ಲೈನ್ ನಲ್ಲಿ ತಮ್ಮ ಸ್ಮಾರ್ಟ್ ಕಾರ್ಡ್ ರೀಚಾರ್ಜ್‌ ಮಾಡಿದ ನಂತರ ಒಂದು ಗಂಟೆ ಕಾಯಬೇಕಾಗಿಲ್ಲ. ಸ್ಮಾರ್ಟ್ ಕಾರ್ಡ್‌ ಅನ್ನು ಆನ್‌ಲೈನ್ ನಲ್ಲಿ ರೀಚಾರ್ಜ್‌ ಮಾಡಿದ ತಕ್ಷಣವೇ ನಿಮ್ಮ ಮೊತ್ತ ಪ್ರತಿಬಿಂಬಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರು ಸುಮಾರು ಒಂದು ಗಂಟೆ ಕಾಯಬೇಕಾದ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಇತ್ತೀಚೆಗೆ ತನ್ನ ಎಲ್ಲಾ ನಿಲ್ದಾಣಗಳಲ್ಲಿ 'ಕಾರ್ಡ್ ಟಾಪ್-ಅಪ್ ಟರ್ಮಿನಲ್'ಗಳನ್ನು ಸ್ಥಾಪಿಸಿದೆ, ಇದು ಆನ್‌ಲೈನ್ ಬ್ಯಾಲೆನ್ಸ್ ಅನ್ನು ತಕ್ಷಣವೇ ಪ್ರತಿಬಿಂಬಿಸುತ್ತದೆ.

ಈ ಹೊಚ್ಚ ಹೊಸ, ನೀಲಿ-ಬಣ್ಣದ ಯಂತ್ರಗಳು ಎಲ್ಲಾ ನಿಲ್ದಾಣಗಳಲ್ಲಿ ಸ್ವಯಂಚಾಲಿತ ಶುಲ್ಕ ಸಂಗ್ರಹ (AFC) ಗೇಟ್‌ಗಳ ಬಳಿ ಪ್ರಮುಖವಾಗಿ ಸ್ಥಾನ ಪಡೆದಿವೆ.

"ಈ ಹೊಸ ಯಂತ್ರಗಳನ್ನು ನಮ್ಮ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಪ್ರಾಯೋಗಿಕ ಚಾಲನೆಗಳು ಬಹುತೇಕ ಎಲ್ಲೆಡೆ ಪೂರ್ಣಗೊಂಡಿವೆ. ಅವು ಎರಡು ಅಥವಾ ಮೂರು ದಿನಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಶೀಘ್ರದಲ್ಲೇ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ತಿಳಿಸುವ ಬೋರ್ಡ್‌ಗಳನ್ನು ಹಾಕಲಾಗುವುದು ಎಂದು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬಿಎಂಆರ್ ಸಿಎಲ್ ನ ಈ ಕ್ರಮದ ಬಗ್ಗೆ ಗ್ರಾಹಕರು ಸಮಾಧಾನ ವ್ಯಕ್ತಪಡಿಸಿದ್ದು, "ನಾನು ನನ್ನ ಕಾರ್ಡ್ ಅನ್ನು ಟರ್ಮಿನಲ್‌ನಲ್ಲಿ ಸ್ವೈಪ್ ಮಾಡಿದ್ದೇನೆ ಮತ್ತು ಅದು ಆನ್‌ಲೈನ್ ಟಾಪ್-ಅಪ್ ಅನ್ನು ಪ್ರತಿಬಿಂಬಿಸುತ್ತಿದೆ. ಇದರಿಂದ ಒಂದು ಗಂಟೆ ಕಾಯುವುದು ತಪ್ಪಿದಂತಾಗಿದೆ" ಎಂದು ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ನಾಗಸಂದ್ರಕ್ಕೆ ನಿತ್ಯ ಪ್ರಯಾಣಿಸುವ ಉತ್ತಮ್ ದಾಸ್ ಅವರು ಹೇಳಿದ್ದಾರೆ.

ಈ ಮುಂಚೆ ಪ್ರಯಾಣಿಕರು ಆನ್ ಲೈನ್ ನಲ್ಲಿ ತಮ್ಮ ಸ್ಮಾರ್ಟ್ ಕಾರ್ಡ್ ಅನ್ನು ರೀಚಾರ್ಜ್ ಮಾಡಿದ ಒಂದು ಗಂಟೆ ನಂತರ ಮೆಟ್ರೋದಲ್ಲಿ ಪ್ರಯಾಣಿಸಬಹುದಾಗಿತ್ತು.

SCROLL FOR NEXT