ರಾಜ್ಯ

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ 10 ದಿನಗಳ ಗಡುವು ನೀಡಿದ ಸಚಿವ ಆರ್‌ ಅಶೋಕ್‌!

Manjula VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್‌ ಅಶೋಕ್‌ 10 ದಿನಗಳ ಗಡುವು ನೀಡಿದ್ದಾರೆ. 

ನಗರದಲ್ಲಿನ ರಸ್ತೆ ಗುಂಡಿ ಸಮಸ್ಯೆ ಮತ್ತು ಶಿಥಿಲಾವಸ್ಥೆ ಕಟ್ಟಡ ಕುಸಿತ ಘಟನೆ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಆರ್.ಅಶೋಕ್ ಮಾತನಾಡಿದ್ದಾರೆ. 

ನಗರದಲ್ಲಿ ಸುಮಾರು 13,874 ಕಿ.ಮೀ ರಸ್ತೆಗಳಿವೆ. 134 ಪ್ರಮುಖ ರಸ್ತೆ ಮತ್ತು ಒಳ ರಸ್ತೆಗಳಿದೆ. 895 ಕಿಮೀ ರಸ್ತೆ ಸುಸ್ಥಿತಿಯಲ್ಲಿದ್ದು, ಈ ಪೈಕಿ 449 ಕಿಮೀ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಸದ್ಯ 246 ಕಿಮೀ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಗುಂಡಿ ಮುಚ್ಚಲು ಪ್ರತೀನಿತ್ಯ ಜಲ್ಲಿ ಮಿಕ್ಸ್ ಸ್ಥಾವರದಿಂದ 16 ಲೋಡ್ ಜಲ್ಲಿ ಮಿಕ್ಸ್ ಸರಬರಾಜು ಆಗುತ್ತದೆ. ಆಧರೆ, ಇತ್ತೀಚಿನ ಮಳೆಯಿಂದಾಗಿ ಜಲ್ಲಿ ಮಿಕ್ಸ್ ಸರಬರಾಜು ಆಗದೇ ಗುಂಡಿ ಮುಚ್ಚಲು ಆಗಲಿಲ್ಲ. ಆದರೆ, ಈಗ ಮುಂದಿನ 10 ದಿನಗಳಲ್ಲಿ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. 28 ದಿನಗಳಲ್ಲಿ ಒಳ ರಸ್ತೆಗಳನ್ನು ಸ್ಥಳೀಯ ಗುತ್ತಿಗೆದಾರರ ಮೂಲಕ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು. 

ನಗರದಲ್ಲಿದೆ 185 ಶಿಥಿಲ ಕಟ್ಟಡಗಳು...
ನಗರದಲ್ಲಿ ಸುಮಾರು 185 ಶಿಥಿಲ ಕಟ್ಟಡಗಳಿವೆ ಎಂದು 2019ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ತಿಳಿದುಬಂದಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ಈ ಕಟ್ಟಡಗಳ ಪೈಕಿ ಕೇವಲ 10 ಕಟ್ಟಡಗಳನ್ನು ಮಾತ್ರ ಈವರೆಗೆ ಒಡೆಯಲಾಗಿದೆ. ಶಿಥಿಲಗೊಂಡಿರುವ 175 ಕಟ್ಟಡಗಳು ಹಾಗೆಯೇ ಇವೆ. ಶಿಥಿಲ ಎಂದು ಗುರುತಿಸಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುತ್ತೇವೆ. ಬೆಸ್ಕಾಂಗೆ ಪತ್ರ ಬರೆದು ವಿದ್ಯುತ್ ಕಡಿತ ಮಾಡುತ್ತೇವೆ. ಕಟ್ಟಡಗಳ ಮಾಲೀಕರು ಇಷ್ಟಕ್ಕೆ ಅವಕಾಶ ನೀಡದೆ ಸ್ವತಃ ತಾವೇ ತೆರವುಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ. 

ಶಿಥಿಲಗೊಂಡಿರುವ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಬೇಕು. ನೋಟಿಸ್ ನೀಡದಿದ್ದರೆ ಬಿಬಿಎಂಪಿ ಜಂಟಿ ಆಯುಕ್ತರೇ ಹೊಣೆಯಾಗಬೇಕಾಗುತ್ತದೆ. ನೋಟಿಸ್ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ. 

ಶಇಥಿಲ ಕಟ್ಟಡ ಒಡೆಯುವ ಸಂಬಂಧ ಮನೆ ಮಾಲೀಕರಿಗೆ ನೋಟಿಸ್ ನೀಡಿದ 7 ದಿನದಲ್ಲಿ ಮನೆ ಖಾಲಿ ಮಾಡಲು ಕಾಲಾವಕಾಶ ನೀಡಲಾಗುತ್ತದೆ. ಮನೆ ಖಾಲಿ ಮಾಡದಿದ್ದರೆ ಬೆಸ್ಕಾಂ, ಜಲಮಂಡಳಿ ಸಂಪರ್ಕ ಕಡಿತತ ಮಾಡಲಾಗುತ್ತದೆ. ನೋಟಿಸ್ ನೀಡಿದರೂ ಒಡೆಯದಿದ್ದರೆ ಪಾಲಿಕೆಯೇ ಒಡೆದು ಹಾಕಲಿದೆ. ತೆರವಿಗೆ ತಗಲುವ ವೆಚ್ಚವನ್ನು ಕಟ್ಟಡ ಮಾಲೀಕರ ಆಸ್ತಿ ತೆರಿಗೆಗೆ ಸೇರಿಸಲಾಗುತ್ತದೆ. ಸಾರ್ವಜನಿಕರು ಕೂಡ ತಮ್ಮ ನೆರೆಹೊರೆಯಲ್ಲಿ ಮನೆಗಳು ಶಿಥಿಲವಾಗಿದ್ದರೆ ಬಿಬಿಎಂಪಿಗೆ ದೂರು ನೀಡಬೇಕು ಎಂದರು. 

SCROLL FOR NEXT