ರಾಜ್ಯ

ಕೊಡಗಿನಲ್ಲಿ ಕಾಫಿ ಡೇ ಸಂಭ್ರಮ: ರಾಜಾಸೀಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಿಸಿದ ಮಹಿಳಾ ಕಾಫಿ ಜಾಗೃತಿ ಸಂಘ

Manjula VN

ಮಡಿಕೇರಿ: ಕಾಫಿಗೆ ಜಗತ್ತಿನಲ್ಲೇ ಹೆಸರು ವಾಸಿಯಾದ ಕೊಡಗಿನಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಡಿಕೇರಿ ನಗರದ ರಾಜಾಸೀಟ್‌ ರಸ್ತೆಯಲ್ಲಿನ ತಡ್ಕಾ ಹೌಸ್‌ನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ, ರಾಜಾಸೀಟ್‌ನಲ್ಲಿ ರೋಟರಿ ಮಿಸ್ಟಿ ಹಿಲ್ಸ್‌, ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಮಕ್ಕಂದೂರಿನ ವಿಎಸ್‌ಎಸ್‌ಎನ್‌ ಸಭಾಂಗಣದಲ್ಲಿ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಫಿ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು.

ಮಡಿಕೇರಿಯ ತಡ್ಕಾ ಹೌಸ್‌ನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (ಸಿಡಬ್ಲ್ಯುಸಿಎಬಿ) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಿಸಲಾಯಿತು. 

ಕಾಫಿ ದಿನಾಚರಣೆಯನ್ನು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್‌.ದೇವಯ್ಯ ಉದ್ಘಾಟಿಸಿದರು. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ, ವಕೀಲ ಪಾಸುರ ಪ್ರೀತಂ, ಹಿರಿಯ ವೈದ್ಯಾಧಿಕಾರಿ ಡಾ.ಮೋಹನ್‌ ಅಪ್ಪಾಜಿ ಮಾತನಾಡಿದರು. ದಿನವಿಡೀ ಸಾರ್ವಜನಿಕರಿಗೆ ಸ್ವಾದಿಷ್ಟ ಮತ್ತು ಬಿಸಿಯಾದ ಕಾಫಿಯನ್ನು ಉಚಿತವಾಗಿ ನೀಡುವ ಮೂಲಕ ಕಾಫಿ ಪಾನೀಯದ ಮಹತ್ವ ತಿಳಿಸಲಾಯಿತು.

ಈ ವೇಳೆ ಮಾತನಾಡಿರುವ ಸಿಡಬ್ಲ್ಯುಸಿಎಬಿ ಜಂಟಿ ಕಾರ್ಯದರ್ಶಿ ಜ್ಯೋತಿಕಾ ಬೋಪಣ್ಣ ಅವರು, ನಮ್ಮ ಕಾಫಿಯನ್ನು ಉತ್ತೇಜಿಸಲು ಬಯಸುತ್ತಿದ್ದೇವೆ. ಹೀಗಾಗಿ  ಅಂತರಾಷ್ಟ್ರೀಯ ಕಾಫಿ ದಿನದ ಅವಕಾಶವನ್ನು ಬಳಕೆ ಮಾಡಿಕೊಂಡು ಎಲ್ಲರಿಗೂ ಫಿಲ್ಟರ್ ಕಾಫಿ ವಿತರಿಸುತ್ತಿದ್ದೇವೆಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗಾರಿಕೆ ಕಡಿಮೆಯಾಗಿದ್ದು, ಸರ್ಕಾರವು ಕಾಫಿ ಕ್ಷೇತ್ರವನ್ನು ಬೆಂಬಲಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಕಾಫಿ ದಿನವನ್ನು ಮಡಿಕೇರಿಯಲ್ಲಿ ಕಾಫಿ ಕೃಪಾ ಕಟ್ಟಡದಲ್ಲಿಯೂ ಆಚರಿಸಲಾಯಿತು. ಈ ನಡುವೆ ಮಡಿಕೇರಿಯ ಹೆಸರಾಂತ ಉದ್ಯಾನವನ ರಾಜಾಸೀಟ್'ನಲ್ಲಿ ತಂಗಾಳಿ ನಡುವೆ ರೋಟರಿ ಮಿಸ್ಟಿ ಹಿಲ್ಸ್ ಕಾಫಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಕಾಫಿ ಸೇವನೆ ಬಗ್ಗೆ ಅರಿವು ಮೂಡಿಸುವ ಸ್ಟಿಕ್ಕರ್ ಗಳನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅನಾವರಣಗೊಳಿಸಿದರು. ಈ ವೇಳೆ ಕಲಾವಿದ ಬಿ.ಆರ್. ಸತೀಶ್ ರೂಪಿಸಿದ ಕಾಫಿ ಸಂಬಂಧಿತ ಆಕರ್ಷಕ ಚಿತ್ರ ಸ್ಥಳದಲ್ಲಿ ನೆರೆದಿದ್ದ ಜನರನ್ನು ಆಕರ್ಷಿಸಿತು. 

SCROLL FOR NEXT