ರಾಜ್ಯ

ಪ್ರವಾಸೋದ್ಯಮ ಅಭಿವೃದ್ಧಿಗಾಗಿ 643 ಕೋಟಿ ರೂ.ಗಳ ವಿಶೇಷ ಯೋಜನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Manjula VN

ಹೊಸಪೇಟೆ: ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸೇರಿ ವಿಜಯನಗರ ಜಿಲ್ಲೆಯಲ್ಲಿ ಮಹತ್ವದ ಪಾರಂಪರಿಕ ಪ್ರವಾಸೀ ಸ್ಥಳದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 643 ಕೋಟಿ ರೂ.ಗಳ ವಿಶೇಷ ಯೋಜನೆಯನ್ನು ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ವಿಜಯನಗರ ನೂತನ ಜಿಲ್ಲೆಯಿಂದ ವಿಜಯನಗರ ಸಾಮ್ರಾಜ್ಯದ ಗತವೈಭವ ಪುನರ್ ಸ್ಥಾಪನೆಯಾಗಿದೆ. ಕರ್ನಾಟಕದ ಎಲ್ಲ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನು ಸುಖ ಸಮೃದ್ಧಿಯಿಂದ ಬದುಕಬೇಕು.  ಸಮಾನತೆಯಿಂದ ಅವಕಾಶ ನೀಡಿ ಎಲ್ಲ ಕನ್ನಡಿಗರೂ ಸ್ವಾಭಿಮಾನದಿಂದ ಬದುಕುವ ರೀತಿಯಲ್ಲಿ ಆಡಳಿತ ನೀಡಲಾಗುವುದು. ವಿಜಯನಗರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ಹಳ್ಳಿಗಳ ಕಟ್ಟಕಡೆಯ ಕುಟುಂಬವೂ ನೆಮ್ಮದಿಯಿಂದ ಬದುಕಲು ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡುವ ಸಂಕಲ್ಪ ಮಾಡಿದ್ದೇವೆ ಎಂದು  ತಿಳಿಸಿದರು.

ವಿಜಯನಗರ ಜಿಲ್ಲೆಗೆ ಶ್ರೀಮಂತ ಪರಂಪರೆ ಇದೆ. ಹಂಪಿಯಲ್ಲಿನ ಶಿಲ್ಪಕಲೆ,  ನಮ್ಮ ಪೂರ್ವಜರ ಶೌರ್ಯ, ನಮ್ಮ ಕಲೆ, ಸಂಗೀತ, ಸಂಸ್ಕೃತಿಯನ್ನು ಸಾರುತ್ತದೆ. ಹಂಪಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಬೇಕು. ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸಲಾಗುವುದು. ಈ  ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು. 

ಈ ಜಿಲ್ಲೆಗೆ 83 ಎಕರೆ ವಿಸ್ತೀರ್ಣದ ವಿಶಾಲವಾದ ಜಿಲ್ಲಾಡಳಿತ ಕೇಂದ್ರ ಸ್ಥಾಪನೆಗೆ ಸರ್ಕಾರ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು. ಇಂದು 337 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ವಿಜಯನಗರ ಜಿಲ್ಲೆಯ ಸ್ಥಾಪನೆಯ ದಿನ ಅಭಿವೃದ್ಧಿ ಪರ್ವದ ಆರಂಭದ ಸಂಕೇತ ಎಂದು  ತಿಳಿಸಿದರು. 31ನೇ ಜಿಲ್ಲೆಯಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ 250 ಬೆಡ್ ಗಳ ಆಸ್ಪತ್ರೆಯ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು.

ನಾಡನ್ನು ಕಟ್ಟುವ ಕನಸಿನಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.  ಪ್ರತಿಯೊಂದು ಗ್ರಾಮಪಂಚಾಯತಿಯ ಜನರಿಗೆ ಸರ್ಕಾರದ ಎಲ್ಲ ಸೇವೆಗಳನ್ನು ಸಮರ್ಪಿಸುವ ಕಾರ್ಯವನ್ನು ಮುಂದಿನ ಜನವರಿ 26 ರಂದು ಪ್ರಾರಂಭಿಸಲಾಗುವುದು  ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.  ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆನಂದ ಸಿಂಗ್, ಗೋವಿಂದ ಕಾರಜೋಳ, ಡಾ.ಸಿಎನ್ ಅಶ್ವತ್ಥನಾರಾಯಣ, ಸಿಸಿ ಪಾಟೀಲ್. ಬೈರತಿ ಬಸವರಾಜ, ಬಿ.ಶ್ರೀರಾಮುಲು, ಸುನಿಲ್ ಕುಮಾರ್ ಮತ್ತಿತರು ಭಾಗವಹಿಸಿದ್ದರು.
 

SCROLL FOR NEXT