ರಾಜ್ಯ

ಜಲಾಶಯ ನಿರ್ಮಾಣ ಸಂಬಂಧ ಆಂಧ್ರ, ತೆಲಂಗಾಣ ಜೊತೆ ಶೀಘ್ರದಲ್ಲೇ ಮಾತುಕತೆ: ಸಿಎಂ ಬೊಮ್ಮಾಯಿ

Manjula VN

ಬಳ್ಳಾರಿ: ತುಂಗಭದ್ರ ಜಲಾಶಯ ನಿರ್ಮಾಣ ಸಂಬಂಧ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆಗೆಯುವ ಬಗ್ಗೆ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಆದರೆ, ಯಾವುದೇ ಕಂಪೆನಿ ಮುಂದೆ ಬಾರದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ನಮ್ಮ ಸರ್ಕಾರ ನಿರ್ಧರಿಸಿತ್ತು. ಅದರಂತೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಯೋಜನೆಯ ಡಿಪಿಆರ್ ಸಿದ್ಧಗೊಳಿಸಲು 23 ಕೋಟಿ ರೂ.ಬಿಡುಗಡೆ ಮಾಡಿದ್ದರು.  ಡಿಪಿಆರ್ ಸಿದ್ಧವಾದ ಬಳಿಕ ಸಂಬಂಧ ಪಟ್ಟ ರಾಜ್ಯಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ, ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ. 

ಮೇಕೆದಾಟು ನಮ್ಮ ಸಾಂವಿಧಾನಿಕ ಹಕ್ಕು
ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, ಇದು ನಮ್ಮ ಸಾಂವಿಧಾನಿಕ ಹಕ್ಕು. ತಮಿಳುನಾಡು ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಮಿಳುನಾಡು ಎಷ್ಟೇ ವಿರೋಧ ಮಾಡಿದರೂ ತಲೆಕೆಡಿಸಿಕೊಳ್ಳದೆ ಮೇಕೆದಾಟು ಯೋಜನೆಯನ್ನು ಮಾಡೇ ತೀರುತ್ತೇವೆ. ಈ ಕುರಿತ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಮೇಕೆದಾಟು ಯೋಜನೆಗೆ ನೀರನ್ನು ಕೊಡುವಂತಹದ್ದು ಅಥವಾ ಯೋಜನೆ ಮಾಡುವಂತಹದ್ದು ತಮಿಳುನಾಡಿನವರ ಕೈಯಲಿಲ್ಲ. ಅವರು ಏನೇ ಮಾತಾಡಿದರೂ, ಏನೇ ನಿರ್ಣಯ ಮಾಡಿದರೂ ಅದಕ್ಕೆ ಅರ್ಥ ಇಲ್ಲ. ಈ ಸತ್ಯ ಗೊತ್ತಿದ್ದೂ, ಅಲ್ಲಿನ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಅಲ್ಲಿನ ಮುಖಂಡರು ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ. ಯೋಜನೆ ಕಾರ್ಯಗತಗೊಳಿಸುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಯಾವುದೇ ಕಾರಣಕ್ಕೂ ನಮ್ಮ ಪ್ರಯತ್ನ ನಿಲ್ಲುವುದಿಲ್ಲ. ಕಾನೂನಾತ್ಮಕ ಹೋರಾಟದಲ್ಲೂ ಬದಲಾವಣೆ ಇಲ್ಲ. ಮೇಕೆದಾಟು ಆಗಿಯೇ ಆಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT