ರಾಜ್ಯ

ಹೋಮಿಯೊಪಥಿ ಮಂಡಳಿ ಚುನಾವಣೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Srinivasamurthy VN

ಬೆಂಗಳೂರು: ಕರ್ನಾಟಕ ಹೋಮಿಯೊಪಥಿ ಮಂಡಳಿ ಚುನಾವಣೆಯ ಭೌತಿಕ ಮತದಾನ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಹೋಮಿಯೊಪಥಿ ಮಂಡಳಿ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಚುನಾವಣೆಯಲ್ಲಿ ಲಿ ಭೌತಿಕ ಮತದಾನಕ್ಕೆ ಅವಕಾಶ ಕಲ್ಪಿಸಲು ನಿರ್ದೇಶನ ಕೋರಿ ಡಾ. ಪ್ರಕಾಶ್ ಮಂಟಿಕೊಪ್ಪ ಸೇರಿದಂತೆ ಮೂವರು ಹೋಮಿಯೊಪಥಿ ವೈದ್ಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರತಿವಾದಿಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಹೋಮಿಯೊಪಥಿ ಮಂಡಳಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಿದೆ.

ಸದ್ಯ ಕರ್ನಾಟಕ ಹೋಮಿಯೊಪಥಿ ಮಂಡಳಿಯಲ್ಲಿ ಅಂಚೆ ಮತಪತ್ರದ ಮೂಲಕ ಮಾತ್ರ ಮತದಾನ ನಡೆಯುತ್ತಿದೆ. ವೈದ್ಯರ ಕಾಯ್ದೆ-1961ರ ಕಲಂ 11 ಹಾಗೂ 12ರ ಪ್ರಕಾರ ಹೋಮಿಯೊಪಥಿ ಮಂಡಳಿಯ ಚುನಾವಣೆಯಲ್ಲಿ ಅಂಚೆ ಮತಪತ್ರ ಮೂಲಕ ಮಾತ್ರ ಮತದಾನ ಮಾಡಲು ಅವಕಾಶವಿದೆ. ಇದರಲ್ಲಿ ಪಾರದರ್ಶಕತೆ ಇರುವುದಿಲ್ಲ ಮತ್ತು ಅಕ್ರಮ ನಡೆಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನ ಸೆಳೆದರು. 

ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಸದಸ್ಯರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇ ಮೇಲ್‌ಗೆ ಮತಪತ್ರ ಕಳುಹಿಸಿ, ಮತ ಚಲಾವಣೆಗೆ ಅವಕಾಶ ಕಲ್ಪಿಸಲು ಅಥವಾ ಭೌತಿಕ ಮತದಾನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಹಾಗೂ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಹೋಮಿಯೊಪಥಿ ಮಂಡಳಿ ರಿಜಿಸ್ಟ್ರಾರ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆ ಮುಂದೂಡಿದೆ.
 

SCROLL FOR NEXT