ರಾಜ್ಯ

ಜಯನಗರ ವಾಣಿಜ್ಯ ಸಂಕೀರ್ಣ ಹಂಚಿಕೆ ಪ್ರಕರಣ: ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಆದೇಶ

Manjula VN

ಬೆಂಗಳೂರು: ಜಯನಗರ ವಾಣಿಜ್ಯ ಸಂಕೀರ್ಣದಲ್ಲಿರುವ ಕೆಲ ಮಳಿಗೆಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ಹಂಚಿಕೆ ಮಾಡಿರುವ ಪ್ರಕರಣವನ್ನು ಹೈಕೋರ್ಟ್ ಲೋಕಾಯುಕ್ತ ತನಿಖೆಗೆ ಸೋಮವಾರ ಆದೇಶಿಸಿದೆ.

ಈ ಕುರಿತು ಎಂ. ಶರಣು 2019ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್. ಸಿ ಶರ್ಮಾ ನೇತತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಪ್ರಕರಣದಲ್ಲಿ ಬಿಬಿಎಂಪಿಯ ನಿರ್ಲಕ್ಷವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ಆಯುಕ್ತರ ವಿರುದ್ಧ 'ಆರೋಪ ನಿಗದಿಪಡಿಸಲಾಗುವುದು' ಎಂದಿತು. 

ಈ ವೇಳೆ, ಬಿಬಿಎಂಪಿ ಪರ ವಕೀಲ ಕೆ.ಎನ್. ಪುಟ್ಟೇಗೌಡ ಮನವಿ ಮಾಡಿ, ಆಯುಕ್ತರು 2021ರ ಏ.1ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಮಳಿಗೆಗಳ ಹಂಚಿಕೆಗೂ ಅವರಿಗೂ ಸಂಬಂಧವಿಲ್ಲ. ಆಗಿದ್ದ ಚುನಾಯಿತ ಆಡಳಿತ ಮಂಡಳಿಯ ಅವಧಿಯೂ ಮುಗಿದಿದೆ. ಹಂಚಿಕೆ ಮಾಡಿದ್ದ ಅಧಿಕಾರಿಯೂ ನಿವೃತ್ತರಾಗಿದ್ದಾರೆ. ನಾನು ಸಲ್ಲಿಸಿರುವ ಲಿಖಿತ ಹೇಳಿಕೆಗಳನ್ನು ಪರಿಗಣಿಸಬೇಕು ಎಂದು ಕೋರಿದರು.

ಬಿಬಿಎಂಪಿ ಪರ ವಕೀಲರ ವಾದ ಮತ್ತು ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿದ ಪೀಠ, ಟೆಂಡರ್ ಇಲ್ಲದೇ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಆದ್ದರಿಂದ 2017ರ ಡಿ.6ರ ನ್ಯಾಯಾಲಯದ ಆದೇಶ ಆಧರಿಸಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಲೋಕಾಯುಕ್ತಕ್ಕೆ ನಿರ್ದೇಶನ ನೀಡಿತು. ಅಲ್ಲದೆ, ಲೋಕಾಯುಕ್ತ ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಮತ್ತು ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತಕ್ಕೆ ಒದಗಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪೀಠ ಸೂಚನೆ ನೀಡಿ ವಿಚಾರಣೆಯನ್ನು 2022ರ ಜನವರಿಗೆ ಮುಂದೂಡಿತು.

ಜಯನಗರ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹಂಚಿಕೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕವೇ ಹಂಚಿಕೆ ಮಾಡಬೇಕಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ನಡೆಸದೇ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಹೈಕೋರ್ಟ್ ಗೆ ನೀಡಿದ್ದ ಭರವಸೆಯಂತೆ ಟೆಂಡರ್ ನಡೆಸದೇ ಮಳಿಗೆಗಳನ್ನು ಹಂಚಿಕೆ ಮಾಡಿರುವುದು ಸರಿಯಲ್ಲ ಎಂದಿರುವ ನ್ಯಾಯಾಲಯ, ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲು ಆಯುಕ್ತರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಇದೀಗ ಪಾಲಿಕೆ ವಕೀಲರ ಮನವಿ ಮೇರೆಗೆ ಕ್ರಮ ಜರುಗಿಸುವ ಪ್ರಕ್ರಿಯೆ ಮುಂದೂಡಿರುವ ಪೀಠ, ತನಿಖೆಗೆ ಆದೇಶಿಸಿದೆ.

SCROLL FOR NEXT