ರಾಜ್ಯ

ಬೆಳಗಾವಿ: ಮನೆ ಕುಸಿದು 7 ಮಂದಿ ದುರ್ಮರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

Nagaraja AB

ಬೆಳಗಾವಿ: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬುಧವಾರ ರಾತ್ರಿ  ಮನೆಗೋಡೆ ಕುಸಿದು ಒಂದೇ ಕುಟುಂಬದ ಏಳು ಮಂದಿ ದುರ್ಮರಣ ಹೊಂದಿದ್ದಾರೆ. 

ಮೃತರನ್ನು ಅರ್ಜುನ ಹನುಮಂತ ಖನಗಾಂವಿ (48) ಪತ್ನಿ ಸತ್ಯವ್ವ ಖನಗಾಂವಿ (45) ಪುತ್ರಿ ಲಕ್ಷ್ಮಿ ಖನಗಾಂವಿ (17) ಪೂಜಾ ಅರ್ಜುನ ಖನಗಾಂವಿ (8) ಗಂಗವ್ವ ಭೀಮಪ್ಪ ಖನಗಾಂವಿ (50) ಸವಿತಾ ಭೀಮಪ್ಪ ಖನಗಾಂವಿ (28) ಮತ್ತು ಕಾಶವ್ವ ವಿಠಲ ಕೊಳಪ್ಪನವರ (8) ಎಂದು ಗುರುತಿಸಲಾಗಿದೆ. ಐವರು ಸ್ಥಳದಲ್ಲಿ ಹಾಗೂ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಳೆಯ ಮನೆಯ ಚಾವಣಿ ತೆಗೆದು ಹೊಸದಾಗಿ ಹಾಕುವ ಸಿದ್ಧತೆ ಮಾಡಿಕೊಂಡಿದ್ದ ಮನೆಯವರು, ಪಕ್ಕದಲ್ಲಿ ಹಾಕಿದ ಶೆಡ್ ನಲ್ಲಿ ವಾಸಿಸುತ್ತಿದ್ದರು. ಮಳೆ ಬೀಳುತ್ತಿದ್ದ ವೇಳೆ ಪಕ್ಕದಲ್ಲಿದ್ದ ಶಿಥಿಲಗೊಂಡಿದ್ದ ಗೋಡೆ ಅವರ ಮೇಲೆ ಕುಸಿದು ಬಿದ್ದಿದೆ ಎಂದು  ತಿಳಿದುಬಂದಿದೆ. 

ಮನೆ ಕುಸಿತ ದುರಂತದಿಂದ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಮೃತಪಟ್ಟ ವ್ಯಕ್ತಿಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.  ಅಂತ್ಯಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪರಿಹಾರದ ಹಣವನ್ನು ತಕ್ಷಣ ತಲುಪಿಸಲಾಗುವುದು, ಸರ್ಕಾರ ನಿಮ್ಮ ಜೊತೆಗಿದೆ. ಯಾವುದೇ ಕಾರಣಕ್ಕೂ ದೃತಿಗೆಡದಂತೆ ಧೈರ್ಯ ತುಂಬಿದ್ದಾರೆ.

SCROLL FOR NEXT