ರಾಜ್ಯ

ಬೆಳಗಾವಿ ಮನೆ ಕುಸಿತ ಪ್ರಕರಣ: ಪ್ರಧಾನಿ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ; 5 ಲಕ್ಷ ರೂ. ಚೆಕ್ ವಿತರಿಸಿದ ಕಾರಜೋಳ

Manjula VN

ಬೆಳಗಾವಿ: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬುಧವಾರ ರಾತ್ರಿ ಮನೆಗೋಡೆ ಕುಸಿದು ಒಂದೇ ಕುಟುಂಬದ ಏಳು ಮಂದಿ ದುರ್ಮರಣ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಗಳ ಕಚೇರಿ, ಬೆಳಗಾವಿಯಲ್ಲಿ ಮನೆ ಕುಸಿತದಿಂದ ಜೀವಹಾನಿಯಾಗಿರುವುದು ನೋವು ತಂದಿದೆ. ಈ ದುಃಖದ ಸಮಯದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಮೃತರ ಕುಟುಂಬಗಳಿಗೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳು ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದೆ.

ಏತನ್ಮಧ್ಯೆ, ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಅವರು, ರಾಜ್ಯ ಸರ್ಕಾರದಿಂದ ಪರಿಹಾರವಾಗಿ ಮನೆ ಕುಸಿತದಲ್ಲಿ ಮೃತಪಟ್ಟ ಎಲ್ಲಾ ಏಳು ಮಂದಿಯ ಸಂಬಂಧಿಕರಿಗೆ ತಲಾ 5 ಲಕ್ಷ ರೂ. ಗಳ ಚೆಕ್ ವಿತರಿಸಿದರು. ಸಚಿವರು ಗುರುವಾರ ಬೆಳಿಗ್ಗೆ ಬದಲಂಕಲಗಿಯಲ್ಲಿರುವ ದುಃಖಿತ ಕುಟುಂಬಗಳಿಗೆ ಭೇಟಿ ನೀಡಿ ಚೆಕ್‌ಗಳನ್ನು ನೀಡಿದರು.

ಘಟನೆಯಲ್ಲಿ ಸಾವನ್ನಪ್ಪಿದ ಮೂವರು ಮಕ್ಕಳ ಕುಟುಂಬಕ್ಕೆ ಇನ್ನೂ 1 ಲಕ್ಷ ರೂಪಾಯಿ ಪರಿಹಾರವನ್ನು ಮಕ್ಕಳ ಕಲ್ಯಾಣ ನಿಧಿಯಿಂದ ನೀಡಲಾಗುವುದು ಎಂದು ಕಾರಜೋಳ ಹೇಳಿದರು.

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಕಳೆದ ರಾತ್ರಿ ಮನೆ ಕುಸಿದುಬಿದ್ದು ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದರು. ಘಟನೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೃತರ ಕುಟುಂಬಗಳಿಗೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

SCROLL FOR NEXT