ರಾಜ್ಯ

ಸಾಂವಿಧಾನಿಕ ಕ್ಲಬ್ ಆಗಿ ಬಾಲಬ್ರೂಯಿ ಅತಿಥಿ ಗೃಹ ಪರಿವರ್ತನೆ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

Lingaraj Badiger

ಬೆಂಗಳೂರು: ನಗರದ ಪಾರಂಪರಿಕ ಕಟ್ಟಡ ಬಾಲಬ್ರೂಯಿ ಅತಿಥಿ ಗೃಹವನ್ನು ಶಾಸಕರ ಸಂವಿಧಾನಾತ್ಮಕ ಕ್ಲಬ್ ಆಗಿ ಪರಿವರ್ತಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ.

ಬಾಲಬ್ರೂಯಿ ಅತಿಥಿಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತಿಸುವುದರ ವಿರುದ್ಧ ದತ್ತಾತ್ರಾಯ ಟಿ ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ವಿಭಾಗೀಯ ಪೀಠ, ಮುಂದಿನ ಆದೇಶದವರೆಗೆ ಅತಿಥಿಗೃಹವನ್ನು ಯಾವುದೇ ಸಂಸ್ಥೆಗೆ ಹಂಚಿಕೆ ಮಾಡುವಂತಿಲ್ಲ ಮತ್ತು ಆವರಣದಲ್ಲಿ ಮರಗಳನ್ನು ಕಡಿಯುವಂತಿಲ್ಲ ಎಂದು ಆದೇಶಿಸಿದೆ.

ವಿಚಾರಣೆಯ ಸಮಯದಲ್ಲಿ, ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು, ಪಾರಂಪರಿಕ ಕಟ್ಟಡವನ್ನು ಕ್ಲಬ್ ಆಗಿ ಪರಿವರ್ತಿಸಲು ಮತ್ತು ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ಆದಾಗ್ಯೂ, ನ್ಯಾಯಾಲಯದ ಮುಂದೆ ಇಟ್ಟಿರುವ ವಸ್ತುಗಳು ಅತಿಥಿಗೃಹವನ್ನು ಕ್ಲಬ್ ಆಗಿ ಪರಿವರ್ತಿಸುವ ಕ್ರಮವನ್ನು ಪ್ರತಿಬಿಂಬಿಸುತ್ತದೆ ಮತ್ತು ಕಟ್ಟಡವು ಮಹತ್ವದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ. 

ಮುಂದಿನ ವಿಚಾರಣೆಯ ದಿನಾಂಕದವರೆಗೆ, ರಾಜ್ಯ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಯಾವುದೇ ಸಂಸ್ಥೆಗೆ ಆ ಕಟ್ಟಡವನ್ನು ಹಂಚಬಾರದು ಮತ್ತು ಮರಗಳನ್ನು ಕತ್ತರಿಸುವಂತಿಲ್ಲ ಎಂದಿರುವ ನ್ಯಾಯಾಲಯ, ಪ್ರಕರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಆದೇಶಿಸಿದೆ.

ಬಿಬಿಎಂಪಿಗೆ ಅತಿಥಿಗೃಹದ ಆವರಣದಲ್ಲಿರುವ ಮರಗಳ ಗಣತಿ ನಡೆಸುವಂತೆ ಮತ್ತು ಗಿಡಗಳನ್ನು ರಕ್ಷಿಸುವಂತೆ ತೋಟಗಾರಿಕಾ ಇಲಾಖೆ ಹೈಕೋರ್ಟ್ ನಿರ್ದೇಶನ ನೀಡಿದೆ.

SCROLL FOR NEXT