ರಾಜ್ಯ

ಕೋವಿಡ್ ಪರಿಹಾರ: ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಬಿಬಿಎಂಪಿ ಅವಕಾಶ

Srinivasamurthy VN

ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ವಾರಸುದಾರರು ಸರ್ಕಾರ ನೀಡುವ ಪರಿಹಾರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಬಿಬಿಎಂಪಿ ಆರೋಗ್ಯ ಇಲಾಖೆ ಅವಕಾಶ ಕಲ್ಪಿಸಿದೆ. 

ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬಗಳ ಸಂತ್ರಸ್ತರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ.1 ಲಕ್ಷ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್‌) ರೂ.50 ಸಾವಿರ ನೀಡಲಾಗುವುದು. ಬಿಪಿಎಲ್ ಕುಟುಂಬ ಅಲ್ಲದ ಸಂತ್ರಸ್ತರಿಗೆ ಎಸ್‌ಡಿಆರ್‌ಎಫ್‌ನಿಂದ ರೂ.50 ಸಾವಿರ ಮಾತ್ರ ಪರಿಹಾರವಾಗಿ ದೊರಕಲಿದೆ ಎಂದು ಬಿಬಿಎಂಪಿ ತಿಳಿಸಿದೆ.

ಆಯಾ ವಾರ್ಡ್‌ನ ಕಂದಾಯ ಅಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಕೋವಿಡ್ ದೃಢಪಟ್ಟ ವರದಿ, ಕೋವಿಡ್‌ ರೋಗಿ ಸಂಖ್ಯೆ (ಬಿ.ಯು), ಮರಣ ಪ್ರಮಾಣಪತ್ರ, ಮೃತ ವ್ಯಕ್ತಿಯ ಆಧಾರ್ ಕಾರ್ಡ್‌, ಬಿಪಿಎಲ್‌ ಪಡಿತರ ಚೀಟಿ, ಅರ್ಜಿದಾರರ ಆಧಾರ್ ಕಾರ್ಡ್‌, ಬ್ಯಾಂಕ್ ಖಾತಾ ಪುಸ್ತಕದ ಪ್ರತಿ, ಸ್ವಯಂ ಘೋಷಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಮೃತ ವ್ಯಕ್ತಿಯ ಪತಿ ಅಥವಾ ಪತ್ನಿ ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದಲ್ಲಿ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ –3) ಸಲ್ಲಿಸಬೇಕು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

SCROLL FOR NEXT