ರಾಜ್ಯ

ಬೆಂಗಳೂರು: ನಗರಕ್ಕೆ ಕಾಲಿಡದಂತೆ ಶಿವಾಜಿ ನಗರ ಕುಖ್ಯಾತ ರೌಡಿಶೀಟರ್​​ಗೆ ಒಂದು ವರ್ಷ ಗಡಿಪಾರು

Lingaraj Badiger

ಬೆಂಗಳೂರು: ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದ ಶಿವಾಜಿ ನಗರ ಕುಖ್ಯಾತ ರೌಡಿಶೀಟರ್‌ ಅಮೀರ್ ಖಾನ್(36) ನನ್ನು ಪೊಲೀಸರು ಒಂದು ವರ್ಷ ಗಡಿಪಾರು ಮಾಡಿದ್ದಾರೆ.

ಅಮೀರ್ ಖಾನ್ ಮೇಲೆ 22 ಗಂಭೀರ ಪ್ರಕರಣಗಳಿವೆ. ಈತನಿಂದ ಅನೇಕರಿಗೆ ಜೀವ ಬೆದರಿಕೆ ಇದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೂ ಹಾನಿಯುಂಟುಮಾಡುವ ಸಾಧ್ಯತೆ ಇದೆ. ಕಾನೂನಿನ ಭಯವಿಲ್ಲದೇ ಈತ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ನಗರದಿಂದ ಒಂದು ವರ್ಷ ಗಡಿ ಪಾರು ಮಾಡುವಂತೆ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೀರ್ ಖಾನ್, ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಆತನಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಇದೇ ಅಕ್ಟೋಬರ್ 11ರಿಂದ 2022ರ ಅಕ್ಟೋಬರ್10 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೌಡಿಗಳ ಆಕ್ಟಿವಿಟಿ ಆದರಿಸಿ ಇದೀಗ ಗಡಿಪಾರು ಸೂತ್ರವನ್ನ ಪೊಲೀಸ್ ಇಲಾಖೆ ಅಸ್ತ್ರವಾಗಿ ಬಳಸುತ್ತಿದ್ದು, ಪೂರ್ವ ವಿಭಾಗದಲ್ಲಿ ಈಗಾಗಲೆ ನಾಲ್ಕಕ್ಕೂ ಹೆಚ್ಚು ರೌಡಿಶೀಟರ್ ಗಳನ್ನ ಕಮೀಷನರ್ ಏರಿಯಾದಿಂದ ಹೊರಗಟ್ಟಲಾಗಿದೆ.

SCROLL FOR NEXT