ರಾಜ್ಯ

ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡದಂತೆ ಬುದ್ದಿ ಹೇಳಿದ್ದಕ್ಕೆ ಭಜರಂಗದಳ ನಾಯಕನ ಮೇಲೆ ಹಲ್ಲೆ: ತುಮಕೂರು ಉದ್ವಿಗ್ನ

Shilpa D

ತುಮಕೂರು: ಭಜರಂಗದಳದ ಕಾರ್ಯಕರ್ತರ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಗುಬ್ಬಿ ಗೇಟ್​ ಬಳಿ ನಡೆದಿದೆ.

ಭಜರಂಗದಳದ ತುಮಕೂರು  ಜಿಲ್ಲಾ ಸಂಚಾಲಕ ಮಂಜು ಹಾಗೂ ಇನ್ನೊಬ್ಬ ಕಾರ್ಯಕರ್ತ ಕಿರಣ್​ ಎಂಬವರ ಮೇಲೆ  ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮಂಗಳವಾರ ಸಂಜೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಈ ಘಟನೆ ಸಂಭವಿಸಿದೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ನಡೆಸುತ್ತಿದ್ದವರಿಗೆ ಬುದ್ದಿ ಹೇಳಿದ್ದರಿಂದ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಇಬ್ಬರೂ ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ರಾಡ್​ನಿಂದ ಹಲ್ಲೆ ನಡೆಸಿದೆ. ಹಲ್ಲೆ ಮಾಡಿದವರು ಅನ್ಯಕೋಮಿಗೆ ಸೇರಿದವರು ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಹಲವು ಹಿಂದೂಪರ ಸಂಘಟನೆಗಳ ಸದಸ್ಯರು ಆಸ್ಪತ್ರೆ ಮುಂದೆ ಜಮಾಯಿಸಿ ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಮುಂದೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಆದಷ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು, ಉದ್ದೇಶಪೂರ್ವಕವಾಗಿ ಹಲ್ಲೆ ನಡೆದಿದೇಯೆ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ, ಆರೋಪಿ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ ಎಂದು ತುಮಕೂರು ಜಿಲ್ಲಾ ಎಸ್ ಪಿ ರಾಹುಲ್ ಕುಮಾರ್ ಶಹಾಪುರವಾಡ್ ತಿಳಿಸಿದ್ದಾರೆ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಆರೋಪಿ ಮತ್ತೊಂದು ಕೋಮಿಗೆ ಸೇರಿದವನಾಗಿದ್ದಾನೆ, ಇದೊಂದು ಪೂರ್ವ ನಿರ್ಧರಿತ ಕೃತ್ಯ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ, ಆಸ್ಪತ್ರೆಗೆ ತುಮಕೂರು ಶಾಸಕ ಜ್ಯೋತಿ ಗಣೇಶ್ ಭೇಟಿ ನೀಡಿ, ಪ್ರಕರಣವನ್ನು ಖಂಡಿಸಿದ್ದಾರೆ.

SCROLL FOR NEXT