ರಾಜ್ಯ

ಬೆಂಗಳೂರಿನಲ್ಲಿ ಭೀಕರ ಅಪಘಾತ: ನಜ್ಜುಗುಜ್ಜಾದ ಕಾರು, ಏರ್ ಬ್ಯಾಗ್ ನಿಂದ ಉಳಿಯಿತು ಜೀವ

Srinivasamurthy VN

ಬೆಂಗಳೂರು: ಮಹಾನಗರದಲ್ಲಿ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಏರ್ ಬ್ಯಾಗ್ ನಿಂದ ಕಾರಿನಲ್ಲಿದ್ದವರ ಜೀವ ಉಳಿದಿದೆ.

ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ ಸುಜುಕಿ ಬಲೆನೋ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಸೆಂಟ್ ಜಾನ್ಸ್ ಆಸ್ಪತ್ರೆ ಸಿಗ್ನಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅತಿ ವೇಗವೇ ಈ ಅಫಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸುಜುಕಿ ಬಲೇನೋ ವಾಹನವನ್ನು ಅತೀ ವೇಗವಾಗಿ ಚಲಾಯಿಸಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ.

ಪ್ರಾಣ ಉಳಿಸಿದ ಏರ್ ಬ್ಯಾಗ್ ಗಳು
ಇನ್ನು ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿಯಾದ ಕೂಡಲೇ ಎರಡೂ ಏರ್ ಬ್ಯಾಗ್ ತೆರೆದುಕೊಂಡ ಕಾರಣ ಚಾಲಕ ಮತ್ತು ಇನ್ನೋರ್ವ ಪ್ರಯಾಣಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಏರ್ ಬ್ಯಾಗ್ ಓಪನ್ ಆಗದೇ ಇದ್ದಿದ್ದರೆ ಮತ್ತೊಂದು ದುರಂತ ಸಂಭವಿಸುವ ಸಾಧ್ಯತೆ ಇತ್ತು. 

ಕುಡಿದ ಮತ್ತಿನಲ್ಲಿ ಕಾರು ಚಾಲನೆ?
ಇನ್ನು ಸ್ಥಳೀಯರು ಹೇಳಿರುವಂತೆ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಎರಡೂ ಏರ್ ಬ್ಯಾಗ್ ಒಪನ್ ಆದ ಕಾರಣ ಕಾರಿನಲ್ಲಿದ್ದ ಇಬ್ಬರೂ ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಡಿವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SCROLL FOR NEXT