ರಾಜ್ಯ

ಕಗ್ಗತ್ತಲಲ್ಲಿ ಹೂಡಿ ರೈಲ್ವೇ ಕೆಳ ಸೇತುವೆ: ವಾಹನ ಸವಾರರಿಗೆ ಅಪಾಯ!

Manjula VN

ಬೆಂಗಳೂರು: ಹೂಡಿ ರೈಲು ನಿಲ್ದಾಣದ ಬಳಿ ಇರುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ವಿದ್ಯುತ್ ದೀಪಗಳಿಲ್ಲದ ಕಾರಣ ಈ ಮಾರ್ಗವು ರಾತ್ರಿಯ ಪ್ರಯಾಣದ ಸಂದರ್ಭದಲ್ಲಿ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ಕೆಳ ಸೇತುವೆಯನ್ನು ರೈಲ್ವೆ ಇಲಾಖೆಯೇ ನಿರ್ಮಿಸಿದ್ದರೂ, ನಂತರದ ದಿನಗಳಲ್ಲಿ ಸೇತುವೆ ನಿರ್ವಹಣೆಯನ್ನು ಬಿಬಿಎಂಪಿಗೆ ನೀಡಲಾಗಿತ್ತು. ಆದರೆ, ಸೇತುವೆ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ.

ಕೆಳಸೇತುವೆಯ ಹತ್ತಿರವೇ ಇರುವ ಅಪಾರ್ಟ್ ಮೆಂಟ್ ವೊಂದರ ನಿವಾಸಿ ಪ್ರದೀಪ್ ಎಂಬುವವರು ಮಾತನಾಡಿ, ಸೇತುವೆಗೆ ವಿದ್ಯುತ್ ದೀಪಗಳ ಅಳವಡಿಸಿರುವುದು ಮುಖ್ಯವಾಗಿದೆ. ಮಹಿಳೆಯರು ಈ ಸೇತುವೆ ಕೆಳಗೆ ರಾತ್ರಿ ವೇಳೆ ಓಡಾಡುವುದು ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಎಲ್.ರವಿಕುಮಾರ್ ಎಂಬುವವರು ಮಾತನಾಡಿ, ಸೇತುವೆ ಕೆಳಗೆ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಚಾಕು ಹಿಡಿದುಕೊಂಡು ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಈ ವೇಳೆ ನನ್ನ ಬಳಿ ಇದ್ದ ಎಲ್ಲಾ ಹಣವನ್ನು ನೀಡಿದ್ದೆ. ಆದರೆ, ಹಿಂಬದಿ ಕುಳಿತಿದ್ದ ವ್ಯಕ್ತಿಯ ಬಳಿಯಲ್ಲಿಯೂ ಹಣ ಕೇಳಿದ್ದರು. ಈ ವೇಳೆ ಆತನ ಹಣ ಇರಲಿಲ್ಲ. ಕೋಪಗೊಂಡು ಆತನ ಕೈಯನ್ನು ಕತ್ತರಿಸಿ, ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.

ಕೆಲವರು ಸೇತುವ ಕೆಳಗೆ ಬೈಕ್ ಪಾರ್ಕ್ ಮಾಡಿರುತ್ತಾರೆ. ಮತ್ತು ಸಾಕಷ್ಟು ಪಾನಮತ್ತರಾಗಿರುತ್ತಾರೆ. ನಮ್ಮ ಅಪಾರ್ಟ್ ಮೆಂಟ್ ಸೇತುವೆಯ ಬಳಿಯೇ ಇದ್ದು, ಇಲ್ಲಿ ಓಡಾಡಲು ಸಾಕಷ್ಟು ಭಯವಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಬಿಬಿಎಂಪಿ ರಸ್ತೆ ಮೂಲಸೌಕರ್ಯ ಮುಖ್ಯಸ್ಥ ಪ್ರಹ್ಲಾದ್ ರಾವ್ ಅವರು ಮಾತನಾಡಿ, ಈಗಾಗಲೇ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಭವಿಷ್ಯದಲ್ಲಿ ಸೇತುವೆ ಬಳಿ ವಿದ್ಯುತ್ ಸಮಸ್ಯೆಗಳಾಗದಂತೆ ನೋಡಿಕೊಳ್ಳಲಾಗತ್ತದೆ ಎಂದು ಹೇಳಿದ್ದಾರೆ.

ವೈಟ್‌ಫೀಲ್ಡ್ ಕಾನೂನು ಮತ್ತು ಸುವ್ಯವಸ್ಥೆ ನಿರೀಕ್ಷಕ ಗಿರೀಶ್ ಅವರು ಮಾತನಾಡಿ, ವಿಚಾರ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

SCROLL FOR NEXT