ರಾಜ್ಯ

ಹಿಂದೂಗಳ ಭಾವನೆಗಳಿಗೆ ಧಕ್ಕೆ ಆರೋಪ: ಪ್ರೊ. ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ

Harshavardhan M

ಬೆಂಗಳೂರು: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೊ. ಕೆ ಎಸ್ ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸಾಗರ ತಾಲ್ಲೂಕಿನ ಇಕ್ಕೇರಿಯ ಮಹಾಬಲೇಶ್ವರ ಮಾಪು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ಕೆ ಎಸ್ ಭಗವಾನ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಸರ್ಕಾರವು 8 ವಾರಗಳ ಒಳಗೆ ಪರಿಗಣಿಸಿ ಇತ್ಯರ್ಥಪಡಿಸಬೇಕು. ಒಂದೊಮ್ಮೆ ನಿಗದಿತ ಅವಧಿಯೊಳಗೆ ಅರ್ಜಿ ಇತ್ಯರ್ಥಪಡಿಸದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನಕ್ಕೆ 2 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಆದೇಶಿಸಿತು.

ಭಗವಾನ್ ರಚಿಸಿರುವ ‘ಶ್ರೀರಾಮ ಮಂದಿರ ಏಕೆ ಕಟ್ಟಬಾರದು’ ಎಂಬ ಕೃತಿಯಲ್ಲಿ ಶ್ರೀರಾಮ, ಲಕ್ಷ್ಮಣ, ಆಂಜನೇಯ, ಸೀತಾ ಮಾತೆಯ ಅವಹೇಳನ ಮಾಡಲಾಗಿದೆ. ಹಿಂದೂಧರ್ಮ ಮತ್ತು ಹಿಂದೂಗಳ ನಂಬಿಕೆಗಳನ್ನು ಕೀಳಾಗಿ ಬಿಂಬಿಸಿಲಾಗಿದೆ. ಜತೆಗೆ, ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಮಹಾಬಲೇಶ್ವರ ಮಾಪು ಸಾಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

SCROLL FOR NEXT