ರಾಜ್ಯ

ನ.1 ರಿಂದ ಕೈದಿಗಳಿಗೆ ಜೈಲಿನಲ್ಲೇ ಶಿಕ್ಷಣ: ಸಚಿವ ಆರಗ ಜ್ಞಾನೇಂದ್ರ

Manjula VN

ಬೆಂಗಳೂರು: ರಾಜ್ಯದ ಜೈಲುಗಳಲ್ಲಿರುವ ಕೈದಿಗಳಿಗೆ ನವೆಂಬರ್ 1 ರಿಂದ ಜೈಲಿನಲ್ಲೇ ಶಿಕ್ಷಣ ನೀಡುವ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭಿಸುತ್ತೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ವಿವಿಧ ಜೈಲುಗಳಲ್ಲಿ ಹದಿನಾರು ಸಾವಿರ ಖೈದಿಗಳಿದ್ದು, ಈ ಪೈಕಿ ಅನಕ್ಷರಸ್ಥ ಕೈಜಿಗಳು ಎಷ್ಟು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 6 ಸಾವಿರ ಮಂದಿ ಅನಕ್ಷರಸ್ಥ ಕೈದಿಗಳಿದ್ದಾರೆಂದು ತಿಳಿದುಬಂದಿದೆ. ಇವರಿಗೆ ಶಿಕ್ಷಣ ನೀಡಲು ಪೊಲೀಸ್ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ. ಹೆಬ್ಬೆಟ್ಟು ಒತ್ತಿ ಜೈಲಿಗೆ ಬಂದವರನ್ನು ಸಹಿ ಹಾಕಿ ಹೊರಕಳಿಸಲಾಗುತ್ತದೆ. ಹೀಗಾಗಿ ಈ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಅಕ್ಷರ ಕಲಿಸಲು ಖೈದಿಗಳನ್ನೂ ಬಳಸಿಕೊಳ್ಳಲಾಗುತ್ತದೆ. ಅವರಿಗೆ ಗೌರವ ಧನ ಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಕೈದಿಗಳು ಸೇರಿದಂತೆ 2-3 ತಿಂಗಳಿನಿಂದ ಹಿಡಿದು ಎಷ್ಟು ವರ್ಷದವರೆಗೆ ಜೈಲಿನಲ್ಲಿ ಇರುತ್ತಾರೋ ಅಷ್ಟೂ ವರ್ಷ ಕಲಿಕಾ ತರಗತಿಗಳು ನಡೆಯಲಿವೆ. ಕನಿಷ್ಟ ಎರಡು ತಿಂಗಳು ಜೈಲಿನಲ್ಲಿದ್ದರೂ ಕಲಿಕೆ ಬಗ್ಗೆ ಆಸಕ್ತಿ ಹುಟ್ಟಿಸಿ ಕಳುಹಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಸದ್ಯ ಕವಾಯತು ಮಾಡುವಾಗ ಇಂಗ್ಲಿಷ್ ಕಾಶನ್ ಕೊಡುವ ಪದ್ಧತಿ ಇದೆ. ಆದರೆ, ನವೆಂಬರ್ ಒಂದರಿಂದ ಕನ್ನಡದಲ್ಲಿ ಕವಾಯತು ಮಾಡಲಾಗುತ್ತದೆ. ಈಗಾಗಲೇ ತರಬೇತಿ ಕೊಡಲಾಗುತ್ತದೆ ಎಂದಿದ್ದಾರೆ.

ಕಾರಾಗೃಹ ಇಲಾಖೆಯ ಮುಖ್ಯಸ್ಥರಾಗಿದ್ದ ಮಾಜಿ ಪೊಲೀಸ್ ಮುಖ್ಯಸ್ಥ, ನಿವೃತ್ತ ಐಪಿಎಸ್ ಅಧಿಕಾರಿ ಎಸ್‌ಟಿ ರಮೇಶ್ ಅವರು ಮಾತನಾಡಿ, ಜೈಲಿನಲ್ಲಿ ಕೈದಿಗಳ ಸ್ವಾತಂತ್ರವನ್ನಷ್ಟೇ ನಿರ್ಬಂಧಿಸಲಾಗಿರುತ್ತದೆ. ಅದನ್ನು ಬಿಟ್ಟರೆ ಅವರೂ ಸಾಮಾನ್ಯ ಜನರೆಂದೇ ಪರಿಗಣಿಸಲಾಗುತ್ತದೆ. ಜೈಲಿನಲ್ಲಿದ್ದಷ್ಟು ದಿನ ನೃತ್ಯ, ಸಂಗೀತ ಅಥವಾ ಇನ್ನಾವುದೇ ವಿಷಯವನ್ನು ಕಲಿಯಲು ಅವಕಾಶವಿದೆ. ಇದರಿಂದ ಅವರ ಮನಸ್ಸು ಕೂಡ ಆರೋಗ್ಯವಾಗಿರುತ್ತದೆ ಎಂದು ಹೇಳಇದ್ದಾರೆ.

SCROLL FOR NEXT