ರಾಜ್ಯ

ನಮಗೆ ಯಾವುದೇ ಪ್ರಶಸ್ತಿ ಪಡೆಯುವ ಆಸಕ್ತಿ ಇಲ್ಲ: ಪಿಐಎಲ್ ವಜಾ ಮಾಡಿದ ಕರ್ನಾಟಕ ಹೈಕೋರ್ಟ್

Lingaraj Badiger

ಬೆಂಗಳೂರು: “ಯಾವುದೇ ಪ್ರಶಸ್ತಿ ಪಡೆಯುವ ಆಸಕ್ತಿ ನಮಗೆ ಇಲ್ಲ. ಕೆಲಸ ಮಾಡುವುದು ನಮಗೆ ಇಷ್ಟ” ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್ ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಜಾ ಮಾಡಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಪದ್ಮ ಪ್ರಶಸ್ತಿಗಳಿಗೆ ಪರಿಗಣಿಸಬೇಕು ಮತ್ತು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲು ಆದೇಶಿಸಬೇಕು ಎಂದು ಕೋರಿ ಮನೋವಿಜ್ಞಾನಿ, ವಕೀಲ ಡಾ. ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ಅರ್ಜಿದಾರ ವಕೀಲ ಕುಲಕರ್ಣಿ ಅವರು “ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪುರುಷ ನ್ಯಾಯಮೂರ್ತಿಗಳಿಗೆ ʼನೈಟ್ ಬಾಚುಲರ್ʼ ಮತ್ತು ಮಹಿಳಾ ನ್ಯಾಯಮೂರ್ತಿಗಳಿಗೆ ʼಡೇಮ್ಸ್ ಕಮಾಂಡರ್ʼ ಪದವಿಗಳನ್ನು ನೀಡಲಾಗುತ್ತದೆ. ಇಂಗ್ಲೆಂಡ್ ಮೊಲದ ಸಿಖ್ ಮತ್ತು ಏಷ್ಯಾದ ನ್ಯಾಯಮೂರ್ತಿ ಮೋಟಾ ಸಿಂಗ್ ಅವರಿಗೆ ಬ್ರಿಟನ್ ರಾಣಿ ನೈಟ್ಹುಡ್ ಪದವಿ ನೀಡಿ ಗೌರವಿಸಿದ್ದಾರೆ. ಹೀಗಾಗಿ, ನಮ್ಮ ನ್ಯಾಯಮೂರ್ತಿಗಳನ್ನೂ ಪ್ರಶಸ್ತಿಗೆ ಪರಿಗಣಿಸಬೇಕು” ಎಂದರು.

ಇದಕ್ಕೆ ಪೀಠವು “ನಮ್ಮ ಸಂವಿಧಾನದ ಅಡಿ ಅದಕ್ಕೆ ಅವಕಾಶವಿಲ್ಲ. ನ್ಯಾಯಮೂರ್ತಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಮಗೆ ಬೇರೆ ವಿಷಯ ಸಿಗಲಿಲ್ಲವೇ? ಪ್ರಶಸ್ತಿ ಪಡೆಯಲು ನಮಗೆ ಇಷ್ಟವಿಲ್ಲ. ಕೆಲಸ ಮಾಡಲು ನಮಗೆ ಇಷ್ಟ. ನಮಗೆ ಯಾವುದೇ ಪ್ರಶಸ್ತಿ ಬೇಡ. ಸಂಪೂರ್ಣವಾಗಿ ನಾವು ಪ್ರಶಸ್ತಿಗಳಿಗೆ ವಿರುದ್ಧವಾಗಿದ್ದೇವೆ” ಎಂದು ಪೀಠ ಹೇಳಿತು.

“ತಮ್ಮ ಕೋರಿಕೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಲ್ಪಿಸುವ ಕುರಿತು ಅರ್ಜಿದಾರರು ನ್ಯಾಯಾಲಯದ ಮನವೊಲಿಸಲು ವಿಫಲರಾಗಿದ್ದಾರೆ. ಪದ್ಮ ಪ್ರಶಸ್ತಿಗಳು ಅಥವಾ ರಾಜ್ಯ ಪ್ರಶಸ್ತಿಗಳನ್ನು ನೀಡುವುದು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿರುವ ವಿಚಾರ. ಇಂಥವರಿಗೆ ಪ್ರಶಸ್ತಿ ನೀಡಬೇಕು ಎಂದು ಹೇಳಲು ಯಾರಿಗೂ ಹಕ್ಕಿಲ್ಲ. ಮನವಿ ಯಾವುದೇ ಅರ್ಹತೆ ಹೊಂದಿಲ್ಲದಿರುವುದರಿಂದ ವಜಾ ಮಾಡಲಾಗಿದೆ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

“ನ್ಯಾಯಮೂರ್ತಿಗಳಿಗೆ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಕೊಡಮಾಡುವುದರಿಂದ ಅವರ ಮನೋಬಲ ಹೆಚ್ಚಾಗಲಿದ್ದು, ಅವರ ಕಾರ್ಯನಿರ್ವಹಣೆಯೂ ವೃದ್ಧಿಸಲಿದೆ. ಇದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ತುರ್ತಾಗಿ ಪ್ರಕರಣಗಳ ವಿಲೇವಾರಿ ಮಾಡಲು ಅನುಕೂಲ ಮಾಡಿಕೊಡಬಹುದು” ಎಂದು ವಿನೋದ್ ಕುಲಕರ್ಣಿ ಮನವಿಯಲ್ಲಿ ಹೇಳಿದ್ದಾರೆ.

“ಸರ್ಕಾರಿ ವೈದ್ಯರಿಗೆ ಈ ಪ್ರಶಸ್ತಿಗಳನ್ನು ನೀಡಿ ಹಾಲಿ ನ್ಯಾಯಮೂರ್ತಿಗಳಿಗೆ ನೀಡದಿರುವುದು ಸಂವಿಧಾನದ ಮೂಲರಚನೆಗೆ ವಿರುದ್ಧವಾಗಿದೆ. ವೈದ್ಯ ಮತ್ತು ಕಾನೂನು ಎರಡೂ ವೃತ್ತಿಗಳೂ ಅತ್ಯಂತ ಗೌರವಯುತವಾದ ವೃತ್ತಿಗಳಾಗಿವೆ” ಎಂದು ಹೇಳಿದ್ದಾರೆ.

SCROLL FOR NEXT