ರಾಜ್ಯ

ಪ್ರತಿ ವಾರ್ಡ್‌ಗೆ 60 ಲಕ್ಷ ರೂ. ನೀಡಲಾಗಿದೆ, ನೋಡಲ್ ಅಧಿಕಾರಿಗಳು ಹಣ ಬಳಕೆ ಕುರಿತು ಸಭೆ ನಡೆಸಬೇಕು: ಬಿಬಿಎಂಪಿ ಮುಖ್ಯ ಆಯುಕ್ತ

Lingaraj Badiger

ಬೆಂಗಳೂರು: ಬೆಂಗಳೂರಿನ ಪ್ರತಿ ವಾರ್ಡ್‌ಗೆ ರೂ. 60 ಲಕ್ಷ ಅನುದಾನ ಮೀಸಲಿಡಲಾಗಿದ್ದು, ಅದರಲ್ಲಿ ಫುಟ್‌ಪಾತ್ ದುರಸ್ತಿಗೆ 20 ಲಕ್ಷ ರೂ. ಹಾಗೂ ಗುಂಡಿ ದುರಸ್ತಿಗೆ 20 ಲಕ್ಷ ರೂ ಮತ್ತು ಬೋರ್‌ವೆಲ್‌ಗಳಿಗೆ 20 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ಶುಕ್ರವಾರ ಹೇಳಿದ್ದಾರೆ.

ಎಲ್ಲಾ ನೋಡಲ್ ಅಧಿಕಾರಿಗಳು ವಾರ್ಡ್ ಕಮಿಟಿ ಸಭೆಗಳನ್ನು ನಡೆಸಬೇಕು ಮತ್ತು ಮಂಜೂರು ಮಾಡಿದ ಹಣದ ಬಳಕೆ ಕುರಿತು ಚರ್ಚಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಆಡಳಿತಾಧಿಕಾರಿ ರಾಕೇಶ್ ಸಿಂಗ್ ಜೊತೆ ನಗರದಲ್ಲಿ ನಡೆದ ನೋಡಲ್ ಅಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಗುಪ್ತಾ, ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ಪ್ರತಿ ವಾರ್ಡ್‌ಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ವಾರ್ಡ್ ಕಮಿಟಿಗಳ ಮೂಲಕ, ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ತಕ್ಷಣವೇ ಪರಿಹರಿಸಬೇಕು ಎಂದರು.

ವಾರ್ಡ್ ಕೌನ್ಸಿಲ್ ಸಭೆಗಳನ್ನು ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ನಡೆಸಬೇಕು. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್ ಅಧಿಕಾರಿಗಳು, ವಾರ್ಡ್ ಸಮಿತಿ ನೋಡಲ್ ಅಧಿಕಾರಿಗಳು, ವಾರ್ಡ್ ಸಮಿತಿ ಸದಸ್ಯರು ಮತ್ತು ನಿವಾಸಿಗಳು ಈ ಸಭೆಯಲ್ಲಿ ಭಾಗವಹಿಸಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ನಾಗರಿಕರ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಇದಕ್ಕಾಗಿ ಸ್ವಚ್ಛತೆಯನ್ನು ಕಾಪಾಡಲು ಮತ್ತು ನಗರದ ಘನ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ನಿರ್ವಹಿಸಲು ನಾಗರಿಕ ಪಾಲುದಾರಿಕೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ವಲಯ, ವಿಭಾಗೀಯ, ವಾರ್ಡ್ ಮಟ್ಟದಲ್ಲಿ ಸಂಯೋಜಕರು ಮತ್ತು ಬ್ಲಾಕ್ ಮಟ್ಟದಲ್ಲಿ ಶುಚಿ ಮಿತ್ರರು ಮತ್ತು ಲೇನ್ ಮಟ್ಟದಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಗುಪ್ತಾ ತಿಳಿಸಿದರು.

SCROLL FOR NEXT