ರಾಜ್ಯ

ಮಾನವ ಕಳ್ಳ ಸಾಗಣೆ ಪ್ರಕರಣ: 13 ಬಾಂಗ್ಲಾದೇಶಿಗರ ವಿರುದ್ಧ ಎನ್ ಐಎ ಚಾರ್ಜ್ ಶೀಟ್ ದಾಖಲು

Nagaraja AB

ಬೆಂಗಳೂರು: ಅಕ್ರಮವಾಗಿ ಭಾರತದೊಳಗೆ ನುಸುಳಿದ ನಂತರ ನೆರೆಯ ರಾಷ್ಟ್ರದಿಂದ ಮಹಿಳೆಯರು ಮತ್ತು ಮಕ್ಕಳನ್ನು ಕಳ್ಳ ಸಾಗಣೆಯಲ್ಲಿ ತೊಡಗಿದ್ದ 13 ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಎನ್ ಐಎ ಸೋಮವಾರ ಇಲ್ಲಿನ ವಿಶೇಷ ನ್ಯಾಯಾಲಯವೊಂದರಲ್ಲಿ ಚಾರ್ಜ್ ಶೀಟ್ ದಾಖಲಿಸಿದೆ.

ಎಲ್ಲಾ ಬಾಂಗ್ಲಾದೇಶಿಗರ ವಿರುದ್ಧ ವಿದೇಶಿ ಕಾಯ್ದೆ,  ಅನೈತಿಕವಾಗಿ ಕಳ್ಳ ಸಾಗಣೆ (ತಡೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಗಳೊಂದಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಎನ್ ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೂನ್ ನಲ್ಲಿ ರಾಮಮೂರ್ತಿ ನಗರ ವ್ಯಾಪ್ತಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ 13 ಆರೋಪಿಗಳು ಸಿಕ್ಕಿ ಬಿದ್ದಿದ್ದರು. ಈ ವೇಳೆ ಬಾಂಗ್ಲಾದೇಶದ ಏಳು ಮಹಿಳೆಯರು ಹಾಗೂ ಒಂದು ಮಗುವನ್ನು ಮಾನವ ಕಳ್ಳ ಸಾಗಣೆದಾರರ ವಶದಿಂದ ರಕ್ಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

 ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತಿತ್ತು,  ಬಳಿಕ ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತಿತ್ತು ಎಂಬ ಮಾಹಿತಿ ಲಭ್ಯವಾಗಿದ್ದರಿಂದ  ಎನ್ ಐಎ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು ಎಂದು ಅವರು ತಿಳಿಸಿದ್ದಾರೆ. 

ಆರೋಪಿಗಳು ನಕಲಿ ಗುರುತಿನ ಚೀಟಿಗಳನ್ನು ಸಹ ಹೊಂದಿದ್ದರು ಮತ್ತು ಈ ನಕಲಿ ದಾಖಲೆಗಳನ್ನು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತಿತರ ಭಾರತೀಯ ಗುರುತಿನ ಚೀಟಿಗಳನ್ನು ತಮ್ಮ ಸಂತ್ರಸ್ತರಿಗೆ ಪಡೆಯಲು ಬಳಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎನ್ ಐಎ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT