ರಾಜ್ಯ

ಬೈಯಪ್ಪನಹಳ್ಳಿ ನೂತನ ರೈಲ್ವೆ ಟರ್ಮಿನಲ್ ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ, ಪರಿಶೀಲನೆ

Nagaraja AB

ಬೆಂಗಳೂರು: ದೇಶದಲ್ಲೆ ಮೊಟ್ಟ ಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಗೆ ಪಡೆದಿರುವ, ವಿಮಾನ ನಿಲ್ದಾಣ ಮಾದರಿಯಲ್ಲಿ ನಿರ್ಮಿಸಲಾಗಿರುವ ಬೈಯಪ್ಪನಹಳ್ಳಿಯ ನೂತನ ರೈಲ್ವೆ ನಿಲ್ದಾಣದ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಕೇಂದ್ರ  ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಭೇಟಿ ನೀಡಿ, ಪರಿಶೀಲಿಸಿದರು. ರೈಲ್ವೆ ಯಾರ್ಡ್ ನ ಕಾರ್ಯಕಾರಿ ಅಂಶಗಳು, ಸೌಲಭ್ಯಗಳು ಮತ್ತು ನಿಲ್ದಾಣದಲ್ಲಿ ಒದಗಿಸಲಾದ ನವೀನ ವೈಶಿಷ್ಟ್ಯಗಳನ್ನು ವೀಕ್ಷಿಸಿದ ಸಚಿವರು, ಟರ್ಮಿನಲ್ ನ ಇಂಚಿಂಚೂ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.

ನಂತರ ಮಾತನಾಡಿದ ಸಚಿವರು, ಈ ಪ್ರದೇಶದಲ್ಲಿ ತಯಾರಿಸಿದ ಬಿಳಿ ಸರಕುಗಳು, ಕೈಗಾರಿಕಾ ಉಪಕರಣಗಳು, ಜವಳಿ ಮತ್ತಿತರ ಉತ್ಪನ್ನಗಳನ್ನು ಸಾಗಿಸಲು ಪಾರ್ಸೆಲ್ ವಿಶೇಷ ರೈಲುಗಳ ಓಡಾಟದಿಂದ ಆದಾಯವನ್ನು ಗಳಿಸುವ ಪ್ರಸ್ತಾಪ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ವಿಮಾನ ನಿಲ್ದಾಣ ರೀತಿಯಲ್ಲಿ ಟರ್ಮಿನಲ್ ನಿರ್ಮಿಸಿದ ಎಂಜಿನಿಯರ್ ಗಳ ತಂಡವನ್ನು ವೈಷ್ಣವ್ ಶ್ಲಾಘಿಸಿದರು. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಪ್ರಯಾಣಿಕರ ಸೌಕರ್ಯ ಮತ್ತು ಸೌಕರ್ಯವನ್ನು ಹೆಚ್ಚಿಸಲು, ಒದಗಿಸಲಾದ ಸೌಲಭ್ಯಗಳು, ಮತ್ತು ಸೌಕರ್ಯಗಳು, ಭವಿಷ್ಯದಲ್ಲಿ ದೇಶಾದ್ಯಂತ ನಿರ್ಮಾಣಗೊಳ್ಳುವ ನಿಲ್ದಾಣಗಳಿಗೆ ಮಾನದಂಡವಾಗಲಿದೆ ಎಂದು ಹೇಳಿದರು.

ಈ ನಿಲ್ದಾಣ ಏಳು ಪ್ಲಾಟ್ ಫಾರ್ಮ್ ಗಳನ್ನು ಹೊಂದಿದ್ದು, ದಿನಕ್ಕೆ 1 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಸಾಮರ್ಥ್ಯವನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಎಸ್ಕಾಲೇಟರ್ ಗಳು , ಲಿಫ್ಟ್ ಗಳನ್ನು ಹೊರತುಪಡಿಸಿ ಸಬ್ ವೇಗೆ ಪ್ರವೇಶಿಸಲು ಬ್ರೈಲ್ ಚಿಹ್ನೆಗಳು, ಅಂಡರ್ ಪಾಸ್ ಗಳ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ದಿವ್ಯಾಂಗರ ಸ್ನೇಹಿ ನಿಲ್ದಾಣವಾಗಿದೆ. ನಿಲ್ದಾಣದಲ್ಲಿ ಪರಿಸರ ಸ್ನೇಹಿ ನೀರಿನ ಮರುಬಳಕೆಯ ಘಟಕವೂ ಇದೆ ಎಂದು ಹೇಳಿದರು.

ಬಿಬಿಎಂಪಿಯೊಂದಿಗೆ ಸಮಾಲೋಚಿಸಿ ಟರ್ಮಿನಲ್  ಪ್ರವೇಶಕ್ಕೆ ಕಿರಿದಾದ ರಸ್ತೆ ಪ್ರವೇಶದ ಸಮಸ್ಯೆಯನ್ನು ಬಗೆಹರಿಸಿ ಶೀಘ್ರದಲ್ಲೇ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದು ಸಚಿವ ವೈಷ್ಣವ್ ಹೇಳಿದರು. ಸಂಸದ ಪಿ. ಸಿ. ಮೋಹನ್. ಜನರಲ್ ಮ್ಯಾನೇಜರ್ ಎಸ್ ಡಬ್ಲ್ಯೂಆರ್ ಸಂಜೀವ್ ಕಿಶೋರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SCROLL FOR NEXT