ರಾಜ್ಯ

ಸಣ್ಣಪುಟ್ಟದಕ್ಕೆ ರೌಡಿಶೀಟರ್ ಪಟ್ಟ ಕಟ್ಟುವಂತಿಲ್ಲ; ಅಕ್ರಮ ಕ್ಯಾಸಿನೋ ತಡೆಯದಿದ್ದರೆ ಪೊಲೀಸರೇ ಹೊಣೆ: ಆರಗ ಜ್ಞಾನೇಂದ್ರ

Vishwanath S

ಬೆಂಗಳೂರು: ಇನ್ಮುಂದೆ ಸಣ್ಣಪುಟ್ಟ ಅಪರಾಧಗಳಿಗೆ ರೌಡಿ ಪಟ್ಟ ಕಟ್ಟುವಂತಿಲ್ಲ. ಜೊತೆಗೆ ಅಕ್ರಮ ಕ್ಯಾಸಿನೋ ತಡೆಯದಿದ್ದರೆ ಪೊಲೀಸರೇ ಹೊಣೆ ಹೊರಬೇಕಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆದೇಶಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ರಾಜ್ಯದ ಎಲ್ಲ ಕಡೆ ಸಣ್ಣಪುಟ್ಟ ಕಾರಣಕ್ಕೆ ರೌಡಿಪಟ್ಟಿ ಕಟ್ಟಲಾಗಿದೆ. ಸದಾ ಕಾಲ ಸಮಾಜ ಕಂಟಕರಾಗಿ ಭಯಹುಟ್ಟಿಸುತ್ತಾ ಇರುವವರು ರೌಡಿಪಟ್ಟಿಗೆ ಸೇರಿಸುತ್ತಾರೆ. ಸಾವಿರಾರು ಜನರನ್ನು ರೌಡಿ ಪಟ್ಟಿಯಲ್ಲಿ ಇಡುವುದರಲ್ಲಿ ಅರ್ಥವೇ ಇಲ್ಲ. ಹೀಗಾಗಿ ನಿಯಮಾವಳಿ ಪ್ರಕಾರ ಪರಿಶೀಲಿಸಿ ರೌಡಿಪಟ್ಟಿ ಪರಾಮರ್ಶೆ ಮಾಡಲು ಸೂಚಿಸಲಾಗಿದೆ ಅನೇಕ ಮಾನದಂಡ ಇಟ್ಟು ರೌಡಿ ಶೀಟರ್ ಪಟ್ಟಿ ಪರಾಮರ್ಶೆ ಮಾಡಲಾಗುವುದು. ಆ ಮಾನದಂಡದ ಆಧಾರದಲ್ಲಿ ಮಾತ್ರ ಅದನ್ನು ತೆಗೆಯುತ್ತೇನೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಡಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲ. ಜೊತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಕ್ಯಾಸಿನೋ ಕ್ಲಬ್ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಗೃಹ ಇಲಾಖೆ, ಅಕ್ರಮ ಕ್ಯಾಸಿನೋ ಪತ್ತೆಯಾದಲ್ಲಿ ಅದರ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತಿದೆ. ಅಕ್ರಮ ಕ್ಯಾಸಿನೋ ಕ್ಲಬ್ ಮಟ್ಕಾ ನಡೆಯುತ್ತಿರುವುದನ್ನು ಪೊಲೀಸರು ಗಮನಿಸಿ ಕ್ರಮಕೈಗೊಳ್ಳಬೇಕು. ಒಂದು ವೇಳೆ ಇದನ್ನು ಪೊಲೀಸರು ಸಮರ್ಪಕವಾಗಿ ನಿರ್ವಹಿಸದೇ ಇದ್ದಲ್ಲಿ ಅಕ್ರಮ ತಡೆಯದಿದ್ದರೆ ಅಂಥ ಅಧಿಕಾರಿಗಳನ್ನೇ ಆಯಾ ಸ್ಟೇಷನ್ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ಪೊಲೀಸರ ಬೀಟ್(ಗಸ್ತು) ವ್ಯವಸ್ಥೆಯನ್ನು ಬಲಗೊಳಿಸುವುದಾಗಿ ಹೇಳಿರುವ ಸಚಿವ ಅರಗ ಜ್ಞಾನೇಂದ್ರ, ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ವಸ್ತುಗಳ ಸಾಗಾಣಕೆ ಮೇಲೆ ಗಮನ ಹರಿಸಬೇಕು.ಗಣಿಗಾರಿಕೆ ಹೆಸರಲ್ಲಿ ಜಿಲೆಟಿನ್ ಕಡ್ಡಿ ಎಲ್ಲಿಂದ ಬರ್ತಿದೆ. ಎಲ್ಲಿಗೆ ಸಾಗಾಣಿಕೆ ಆಗುತ್ತಿದೆ ಎಂಬುದನ್ನು ಗಮನಿಸಬೇಕಿದೆ. ಜಿಲೆಟಿನ್ ಕಡ್ಡಿಗಳು ಸಮಾಜ ವಿದ್ರೋಹಿಗಳ ಕೈಗೆ ಸಿಕ್ಕಿದರೆ ದೊಡ್ಡ ಮಟ್ಟದ ಅನಾಹುತವೇ ಸಂಭವಿಸಲಿದೆ. ಬ್ರಿಟಿಷ್ ಕಾಲದಿಂದಲೂ ಬೀಟ್ ಸಿಸ್ಟಮ್ ನಡೆದುಕೊಂಡು ಬಂದಿದೆ ಬೀಟ್ ಸಿಸ್ಟಮ್ ಬಲ ಪಡಿಸಲು ಮತ್ತಷ್ಟು ಕ್ರಮ ಕೈಗೊಳ್ಳುತ್ತೇವೆ. ಬೀಟ್ ವ್ಯವಸ್ಥೆಯಲ್ಲಿ ಪೊಲೀಸರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಗರ ಗ್ರಾಮೀಣ ಎರಡು ಭಾಗದಲ್ಲಿ ಬೀಟ್ ಸಿಸ್ಟಮ್ ಹೆಚ್ಚಿಸಬೇಕು ಅಂತ ಸೂಚಿಸಿದ್ದೇವೆ. ಪೊಲೀಸ್ ಇಲಾಖೆ ಬಲಪಡಿಸಲು ಇನ್ನಷ್ಟು ಕ್ರಮಕೈಗೊಳ್ಳುತ್ತಿರುವುದಾಗಿ ಹೇಳಿದರು.
 

SCROLL FOR NEXT