ರಾಜ್ಯ

ಆಗಸ್ಟ್ ನಲ್ಲಿ 14 ಜಿಲ್ಲೆಗಳಲ್ಲಿ 10, ಅದಕ್ಕಿಂತ ಕಡಿಮೆ ಸಂಖ್ಯೆಯ ಕೋವಿಡ್ ಸಾವು ವರದಿ; ಕ್ಲಸ್ಟರ್ ಗಳ ಬಗ್ಗೆ ತಜ್ಞರ ಎಚ್ಚರಿಕೆ

Nagaraja AB

ಬೆಂಗಳೂರು: ಆಗಸ್ಟ್ 1 ರಿಂದ 30ರವರೆಗೆ ರಾಜ್ಯದ 30 ಜಿಲ್ಲೆಗಳ ಪೈಕಿ 14 ರಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯ ಕೋವಿಡ್ ಸಾವಿನ  ಪ್ರಕರಣಗಳು ವರದಿಯಾಗಿದೆ. ಲಸಿಕೆ ಅಭಿಯಾನ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಕ್ಲಸ್ಟರ್ ಬಗ್ಗೆ ರಾಜ್ಯ ಸರ್ಕಾರ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ 14 ಜಿಲ್ಲೆಗಳಲ್ಲಿ ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬಿದರ್ ನಲ್ಲಿ ತಲಾ 1 ಸಾವಿನ ಪ್ರಕರಣಗಳು ವರದಿಯಾಗಿದ್ದರೆ, ಗದಗ, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಎರಡು, ಚಿಕ್ಕಬಳ್ಳಾಪುರದಲ್ಲಿ ಮೂರು, ರಾಮನಗರದಲ್ಲಿ ನಾಲ್ಕು, ವಿಜಯಪುರ ಮತ್ತು ಬಳ್ಳಾರಿಯಲ್ಲಿ ಆರು, ಚಿಕ್ಕಮಗಳೂರಿನಲ್ಲಿ 8, ಹಾವೇರಿ ಮತ್ತು ಚಾಮರಾಜನಗರದಲ್ಲಿ 10 ಸಾವಿನ ಪ್ರಕರಣಗಳು ದಾಖಲಾಗಿವೆ.

ಬೆಳಗಾವಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಉತ್ತರ ಕನ್ನಡ, ಮಂಡ್ಯ, ಕೊಡಗು ಮತ್ತು ಶಿವಮೊಗ್ಗದಲ್ಲಿ ಕಳೆದ ತಿಂಗಳು 30 ಕ್ಕಿಂತ ಕಡಿಮೆ ಸಾವಿನ ಪ್ರಕರಣಗಳು ವರದಿಯಾಗಿವೆ. ಆದರೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 137, ಬೆಂಗಳೂರು ನಗರದಲ್ಲಿ 114, ಹಾಸನದಲ್ಲಿ 62 ಮತ್ತು ಕೋಲಾರದಲ್ಲಿ 54 ಸಾವಿನ ಪ್ರಕರಣಗಳು ದಾಖಲಾಗಿವೆ.

ಜನರು ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಿದೆ. ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಲಸಿಕೆ ನಿಶ್ಚಿತವಾಗಿ ನೆರವು ನೀಡಿದೆ. ಅಲ್ಲದೇ, ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೇ, ಅಲೆಯೂ ಇಳಿಕೆಯಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯ ಹಾಗೂ ರಾಜ್ಯ ತುರ್ತು ನಿಗಾ ಬೆಂಬಲ ತಂಡ (ಸಿಸಿಎಸ್ ಟಿ) ಸದಸ್ಯ ಡಾ. ಅನೂಪ್ ಅಮರನಾಥ್ ಹೇಳಿದ್ದಾರೆ.

ಕ್ಲಸ್ಟರ್ ಗಳಲ್ಲಿ ಸಾಂಕ್ರಾಮಿಕ ಹರಡದಂತೆ ತಡೆಯಬೇಕಾಗಿದೆ. ಬೆಂಗಳೂರು ಮತ್ತು ಕೋಲಾರದಲ್ಲಿ ಕ್ಲಸ್ಟರ್ ಗಳಿಂದ ಸಾಂಕ್ರಾಮಿಕ ಹರಡುತ್ತಿರುವ ಬಗ್ಗೆ ವರದಿಯಾಗಿದೆ. ಕ್ಲಸ್ಟರ್ ಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ ಎಂದು ಜಯದೇವ ಹೃದ್ರೋಗ ಕೇಂದ್ರದ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.

ಅಧಿಕ ಪ್ರಮಾಣದಲ್ಲಿ ಪರೀಕ್ಷೆ, ಮಾಡುತ್ತಿರುವುದರಿಂದ ಕಡಿಮೆ ಪ್ರಮಾಣದ ಸಾವು ಕಂಡುಬರುತ್ತಿದೆ. ಸುಮಾರು 1.4 ಲಕ್ಷ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಕರಣಗಳನ್ನು ಪತ್ತೆ ಹಚ್ಚಿ, ತ್ವರಿತಗತಿಯಲ್ಲಿ ಐಸೋಲೇಷನ್ ಮಾಡಲಾಗುತ್ತಿದೆ. ಗಡಿ ಜಿಲ್ಲೆಗಳಲ್ಲಿ ಸೂಕ್ತ ಮುಂಜಾಗ್ರತೆಯೊಂದಿಗೆ ಪ್ರಕರಣಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ನೆರವಾಗಿದೆ ಎಂದು ಅವರು ಹೇಳಿದ್ದಾರೆ. 

SCROLL FOR NEXT