ರಾಜ್ಯ

ಕೋವಿಡ್ ಪೀಡಿತ ಕುಟುಂಬಗಳ ನೆರವಿಗಾಗಿ ವಿಶೇಷ ಕಾರ್ಯಕ್ರಮ ಜಾರಿಗೆ ಸರ್ಕಾರ ಚಿಂತನೆ

Nagaraja AB

ಬೆಂಗಳೂರು: ಕೋವಿಡ್-19 ಪೀಡಿತ ಬಡವರಿಗೆ ನೆರವಾಗಲು ರಾಜ್ಯ ಸರ್ಕಾರ ಶೀಘ್ರದಲ್ಲೇ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವು ಅಪಾರ ಸಂಖ್ಯೆಯ ಜನರ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ, ಅನೇಕ ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ, ಅನೇಕ ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಎಲ್ಲಾ ಜನರಿಗೂ ಸಾಮಾಜಿಕ ಭದ್ರತೆ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೋವಿಡ್ ಪೀಡಿತ ಕುಟುಂಬಗಳಿಗೆ ನೆರವು ನೀಡಲು ಹಿಂದಿನ ಬಿಎಸ್ ಯಡಿಯೂರಪ್ಪ ಸರ್ಕಾರ 1 ಲಕ್ಷ ರೂ. ಆರ್ಥಿಕ ನೆರವನ್ನು ಘೋಷಿಸಿತ್ತು,  ಅವರ ಬ್ಯಾಂಕ್ ಖಾತೆಗಳಿಗೆ ನೆರವಾಗಿ ಹಣವನ್ನು ಪಾವತಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.

ಈ ಹಿಂದೆ ಘೋಷಿಸಲಾದ ಆರ್ಥಿಕ ನೆರವಿನ ಜೊತೆಗೆ ಮಕ್ಕಳು ಶಿಕ್ಷಣ ಮುಂದುವರೆಸಲು, ಅವರ ಆರೋಗ್ಯದ ಆರೈಕೆ ಮತ್ತು ಅವರು ಇತರರ ಮೇಲೆ ಅವಲಂಬಿತರಾಗದೆ ಮಾಡಲು ಸರ್ಕಾರ ಕಾರ್ಯಕ್ರಮವೊಂದನ್ನು ರೂಪಿಸಲಿದೆ ಎಂದು ಖಾಸಗಿ ಚಾನಲ್ ವೊಂದರ ಚರ್ಚೆಯಲ್ಲಿ ಬೊಮ್ಮಾಯಿ ತಿಳಿಸಿದರು.

ಸಂಬಂಧಿತ ಇಲಾಖೆಗಳಿಂದ ಮಾಹಿತಿಯನ್ನು ಪಡೆದ ನಂತರ ಶೀಘ್ರದಲ್ಲೇ ಹೊಸ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಮೂಲಗಳು ಹೇಳಿವೆ. 

SCROLL FOR NEXT