ರಾಜ್ಯ

ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆ: ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ಅರಣ್ಯ ಸಂರಕ್ಷಣೆ ಮಾಡಿದ್ದಕ್ಕೆ ಇಂದು ನಾವಿದ್ದೇವೆ. ಹಿರಿಯರ ಹಾಗೆ ನಾವೂ ಮುಂದಿನ ಪೀಳಿಗೆಯವರಿಗೆ ಪರಿಸರ, ಅರಣ್ಯ ಸಂರಕ್ಷಣೆ ಮಾಡಬೇಕಿದೆ. ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗೆ ಶೇ.10 ರಷ್ಟು ಅರಣ್ಯ ವೃದ್ಧಿ ಆಗಬೇಕು. ಕಾಡನ್ನು ಉಳಿಸಿ ಬೆಳೆಸಲು ಸರ್ಕಾರ ಅಗತ್ಯ ಕ್ರಮ ವಹಿಸಲಿದೆ. ಇದೇ ಮೊದಲ ಬಾರಿಗೆ ಪರಿಸರ ನಷ್ಟ ತಪ್ಪಿಸಲು ಯೋಜನೆ ತರಲು ಉದ್ದೇಶಿಸಲಾಗಿದೆ. ಆ ಮೂಲಕ, ಪರಿಸರ ನಷ್ಟ ತಡೆಯಲು ಯತ್ನಿಸಲಾಗುವುದು ಎಂದು ಹೇಳಿದ್ದಾರೆ. 

ಕಾಡು ಉಳಿಸಲು ನಮ್ಮ ಸರ್ಕಾರ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಅತ್ಯಂತ ದಕ್ಷತೆಯಿಂದ ‌ಕಾಡು ಉಳಿಸುವ ಕಾರ್ಯ ಆಗಬೇಕು.ಕಾಡಿನ ಜೊತೆಗೆ ಪ್ರಾಣಿಗಳ ಬಲಿ ಕಡಿಮೆ ಆಗಬೇಕು. ನಾಡಿಗೆ ಬಂದಿರುವ ಕಾಡಿನ ಪ್ರಾಣಿಗಳನ್ನು ಮತ್ತೆ ಕಾಡಿಗೆ ಕಳುಹಿಸಬೇಕು. ಪ್ರಾಣಿಗಳಿಂದ ಮನುಷ್ಯರ ಪ್ರಾಣ ಉಳಿಸುವು‌ದು ಕೂಡ ಮುಖ್ಯ ಎಂದು ತಿಳಿಸಿದ್ದಾರೆ. 

ಮಾಜಿ ಸಿಎಂ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ರೂ.30 ಲಕ್ಷ ಪರಿಹಾರ ಘೋಷಿಸಿದ್ದರು. ಅದುವರೆಗೆ ಪರಿಹಾರ ಮೊತ್ತ ಕಡಿಮೆ ಇತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪನವರಿಗೂ ಅಭಿನಂದನೆ ತಿಳಿಸುತ್ತೇನೆ. ಕೋವಿಡ್‌ ಟೈಮ್‌ನಲ್ಲಿ ಆಕ್ಸಿಜನ್ ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಪರಿಸರ ರಕ್ಷಣೆ ಮೂಲಕ ಆಕ್ಸಿಜನ್ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದು ಎಂದಿದ್ದಾರೆ. 

SCROLL FOR NEXT