ರಾಜ್ಯ

ಶಾಲಾ ವಿದ್ಯಾರ್ಥಿಗಳ ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರಕ್ಕೆ ಸಂಸದ ತೇಜಸ್ವೀ ಸೂರ್ಯ ಚಾಲನೆ

Srinivas Rao BV

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ರವರು ಇಂದು ಬಿ.ಇ.ಎಸ್ ಶಾಲಾ ಆಡಿಟೋರಿಯಂ ನಲ್ಲಿ ಚಾಲನೆ ನೀಡಿದ್ದಾರೆ.

ಈ ಶಿಬಿರವು ಪಿ.ಯು.ಸಿ (12ನೇ ತರಗತಿ) ವರೆಗಿನ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 13 ರಿಂದ 18 ರ ವರೆಗೆ ನಡೆಯಲಿದೆ. ಬೆಂಗಳೂರು ದಕ್ಷಿಣ ಸಂಸದರ ಕಚೇರಿ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಈ ಶಿಬಿರವು, ಡಾ. ಅಗರ್ ವಾಲ್ಸ್ ನೇತ್ರ ಚಿಕಿತ್ಸಾಲಯದ ಸಹಯೋಗದಲ್ಲಿ ಉಚಿತ ಕನ್ನಡಕಗಳನ್ನು ಕೂಡ ವಿತರಿಸಲಾಗುತ್ತಿದೆ. 

ಶಿಬಿರದ ಅಂಗವಾಗಿ ಡಾ. ಅಗರ್ವಾಲ್ಸ್ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಮಕ್ಕಳ ಪೋಷಕರಿಗೂ ಕೂಡ ಇದೇ ಸಂದರ್ಭದಲ್ಲಿ ಕಣ್ಣು ತಪಾಸಣೆ ನಡೆಸಲಾಗುತ್ತಿದೆ. ಫೋರ್ಟಿಸ್ ಆಸ್ಪತ್ರೆ-ಬನ್ನೇರುಘಟ್ಟ ವತಿಯಿಂದಬೆಂಗಳೂರು ದಕ್ಷಿಣ ವ್ಯಾಪ್ತಿಯ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಕೂಡ ಆಯೋಜಿಸಲಾಗಿದ್ದು, ಮುಂಬರುವ ದಿನಗಳಲ್ಲಿ 10,000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಲಾಭ ಪಡೆಯಲಿದ್ದಾರೆ.

ಈ ಶಿಬಿರ ಆಯೋಜನೆಯು ಭಾರತೀಯ ಜನತಾ ಯುವ ಮೋರ್ಚಾದ, ಸೇವಾ & ಸಮರ್ಪಣಾ ಅಭಿಯಾನದ ಅಂಗವಾಗಿ ಆರಂಭಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದೆ.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, "ಇತ್ತೀಚೆಗಿನ ತಂತ್ರಜ್ಞಾನದ ಉಪಕರಣಗಳ ಹೆಚ್ಚಿನ ಬಳಕೆಯ ಪರಿಣಾಮ ಅತೀ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ದೃಷ್ಟಿ ದೋಷದ ಸಮಸ್ಯೆ ಎದುರಿಸುತ್ತಿದ್ದು, ಇದರ ಮುಂಜಾಗ್ರತಾ ಕ್ರಮವಾಗಿ ನೇತ್ರ ಪರೀಕ್ಷೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ.

ಈ ಕಾರ್ಯಕ್ಕೆ ನಮ್ಮೊಂದಿಗೆ ಕೈಜೋಡಿಸಿರುವ  ಡಾ. ಅಗರ್ವಾಲ್ಸ್ ನೇತ್ರ ಚಿಕಿತ್ಸಾಲಯ & ಫೋರ್ಟಿಸ್ ಆಸ್ಪತ್ರೆಯು,ಸಾವಿರಾರು ವಿದ್ಯಾರ್ಥಿಗಳಿಗೆ ಬೃಹತ್ ಪ್ರಮಾಣದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವುದು ನಿಜಕ್ಕೂ ಅಭಿನಂದನಾರ್ಹ. ಮಕ್ಕಳ ಭವಿಷ್ಯದ ದೃಷ್ಟಿಕೋನಕ್ಕೆ ಅನುಕೂಲವಾಗುವ ಇಂತಹ ಶಿಬಿರಗಳು ದೃಷ್ಟಿ ಸಮಸ್ಯೆ ನಿವಾರಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಲಿವೆ" ಎಂದು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಡಾ.ಮಿರ್ಲಯ್ ( ರೀಜನಲ್ ಡೈರೆಕ್ಟರ್, ಡಾ. ಅಗರ್ವಾಲ್ಸ್ ನೇತ್ರ ಚಿಕಿತ್ಸಾಲಯ) ಡಾ. ಮನೀಶ್ ಮಟ್ಟೂ (ಉಪಾಧ್ಯಕ್ಷರು, ವಲವ ನಿರ್ದೇಶಕರು, ಫೋರ್ಟಿಸ್ ಆಸ್ಪತ್ರೆ)  ಹಾಗೂ ಇತರರು ಉಪಸ್ಥಿತರಿದ್ದರು.

SCROLL FOR NEXT