ರಾಜ್ಯ

ರಾಮನಗರ: ಈಗಲ್‌ಟನ್‌ ಒತ್ತುವರಿ ಮಾಡಿದ್ದ 77 ಎಕರೆ ಜಾಗ ವಶಕ್ಕೆ ಪಡೆದ ಜಿಲ್ಲಾಡಳಿತ ಮಂಡಳಿ

Manjula VN

ರಾಮನಗರ: ಬಿಡದಿ ಬಳಿ ಈಗಲ್‌ಟನ್‌ ರೆಸಾರ್ಟ್‌ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಜಿಲ್ಲಾಡಳಿತ ಮಂಡಳಿ ವಶಕ್ಕೆ ಪಡೆದುಕೊಂಡಿದ್ದು, ಈ ಪ್ರದೇಶದಲ್ಲಿ ಇದೀಗ ಬೇಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೈ.ಲಿಮಿಟೆಡ್‌ ಎಂಬ ಸಂಸ್ಥೆಯು ಗೋಮಾಳಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್‌ ಸಮೀಪ ಗಾಲ್ಫ್ ಅಂಕಣ ಹಾಗೂ ರಸ್ತೆ ನಿರ್ಮಿಸಿಕೊಂಡಿತ್ತು.

ಈ ಒತ್ತುವರಿ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಈಗಿನ ಮಾರುಕಟ್ಟೆ ಮೌಲ್ಯದಲ್ಲಿ ದಂಡ ವಸೂಲಿ ಮಾಡುವಂತೆ 2014ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಅದರಂತೆ ರಾಜ್ಯ ವಿಧಾನಮಂಡಲ ಉಪ ಸಮಿತಿಯು ಪರಿಶೀಲನೆ ನಡೆಸಿ ಜಮೀನಿನ ಮಾರುಕಟ್ಟೆ ಮೌಲ್ಯ ನಿಗದಿ ಮಾಡಿದ್ದು, 77 ಎಕರೆಗೆ ರೂ.920 ಕೋಟಿ ದಂಡ ವಾಪತಿಸುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಇದಕ್ಕೆ ಒಪ್ಪದ ಒತ್ತುವರಿದಾರರು 77 ಎಕರೆಗೆ ರೂ.12.35 ಕೋಟಿ ಮಾತ್ರವೇ ಪಾವತಿಸುವುದಾಗಿ ತಿಳಿಸಿದ್ದರು. ಇದಕ್ಕೆ ಸರ್ಕಾರ ಒಪ್ಪದಿದ್ದಾಗ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕಳೆದ ತಿಂಗಳಷ್ಟೇ ಹೈಕೋರ್ಟ್‌ ಅರ್ಜಿದಾರರ ಮನವಿಯನ್ನು ವಜಾ ಮಾಡಿತ್ತು.

ಸಂಬಂಧಿಸಿದ ಜಮೀನಿಗೆ ಸರ್ಕಾರ ನಿಗದಿಪಡಿಸಿದ ದಂಡ ಪಾವತಿಸುವಂತೆ 2017ರಲ್ಲೇ ನೋಟಿಸ್ ನೀಡಿದ್ದೆವು. ಆದರೆ ಈವರೆಗೂ ದಂಡ ಕಟ್ಟದ ಹಿನ್ನೆಲೆಯಲ್ಲಿ ಜಮೀನನ್ನು ವಶಕ್ಕೆ ಪಡೆದಿದ್ದು, ಸುತ್ತಲೂ ಬೇಲಿ ನಿರ್ಮಿಸಲಾಗುವುದು’ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಹೇಳಿದ್ದಾರೆ.

SCROLL FOR NEXT