ರಾಜ್ಯ

ಮೈಸೂರು: ದೇವಸ್ಥಾನ ವಿಚಾರವಾಗಿ ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

Shilpa D

ಮೈಸೂರು: ನಂಜನಗೂಡು ತಾಲೂಕಿನ ಹುಂಚಗುಣಿ ಗ್ರಾಮದಲ್ಲಿ ಮಹದೇವಮ್ಮ ದೇವಸ್ಥಾನ ಸಮಿತಿಯ ಮೇಲೆ ಹಿಡಿತ ಸಾಧಿಸುವ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗೆ ಮೈಸೂರು ಜಿಲ್ಲಾಡಳಿತ ನಂಜನಗೂಡು ತಾಲೂಕಿನ ಉಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಾಲಯವನ್ನು ನೆಲಸಮಗೊಳಿಸಿತ್ತು. ಈ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅವರು ತೆರಳಿದ ಬಳಿಕ ಮಹದೇವಮ್ಮ ದೇಗುಲ ನಿರ್ವಹಣೆಗೆ ಕಮಿಟಿ ರಚಿಸುವ ವಿಚಾರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ರವಿ ಬಿಜೆಪಿ ಕಾರ್ಯಕರ್ತ ಉದಯ ರವಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. 

ಉದಯ ರವಿಯ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಉದಯರವಿ ಸಹೋದರ ಮಚ್ಚು, ಲಾಂಗು ಹಿಡಿದು ಹಲ್ಲೆ ನಡೆಸಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. 

ಪಂಚಾಯತ್ ಚುನಾವಣೆಯಿಂದ ರವಿಕುಮಾರ್ ಮತ್ತು ಉದಯರವಿ ಅವರ ಕುಟುಂಬಗಳು ಭಿನ್ನಾಭಿಪ್ರಾಯವನ್ನು ಹೊಂದಿದ್ದವು ಮತ್ತು ದೇವಾಲಯದ ಪುನರ್ನಿರ್ಮಾಣ ಮತ್ತು ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ ಸಭೆಯಲ್ಲಿ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ರವಿಕುಮಾರ್, ಆತನ ಸಹೋದರರು ಮತ್ತಿರರ ವಿರುದ್ಧ ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT