ರಾಜ್ಯ

ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್‌ಗೆ ರಾಹುಲ್ ಗಾಂಧಿ ಅಂತಿಮ ನಮನ

Manjula VN

ಬೆಂಗಳೂರು: ಕಳೆದ ಸೋಮವಾರ ಇಹಲೋಕ ತ್ಯಜಿಸಿದ ಕಾಂಗ್ರೆಸ್ ಪಕ್ಷದ ರಾಷ್ಟ್ರಮಟ್ಟದ ನಾಯಕ, ರಾಜ್ಯಸಭಾ ಸದಸ್ಯರ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಬೆಂಗಳೂರಿನ ಅಶೋಕ ನಗರದ ಸೇಂಟ್ ಪ್ಯಾಟ್ರಿಕ್ ಚರ್ಚ್ ಆವರಣದಲ್ಲಿ ಕ್ರೈಸ್ತ ಧರ್ಮದ ವಿಧಿ-ವಿಧಾನಗಳು ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. 

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. 

ಬ್ರಿಗೇಡ್ ರಸ್ತೆಯ ಪ್ಯಾಟ್ರಿಕ್ ಚರ್ಚ್‌ನಲ್ಲಿ ಆಸ್ಕರ್ ಫರ್ನಾಂಡಿಸ್ ಪಾರ್ಥೀವ ಶರೀರವನ್ನು ಇಡಲಾಗಿತ್ತು. ರಾಹುಲ್ ಗಾಂಧಿ ಚರ್ಚ್‌ಗೆ ಭೇಟಿ ನೀಡಿ, ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಫರ್ನಾಂಡಿಸ್ ಕುಟುಂಬಕ್ಕೆ ಸಾಂತ್ವನ ಹೇಳಿದರು. 

ಅಂತಿಮ ಸಂಸ್ಕಾರದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ  ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್'ನ ಅನೇಕ ಮುಖಂಡರು, ನಾಯಕರು, ಆಸ್ಕರ್ ಪತ್ನಿ, ಬ್ಲಾಸಂ ಫರ್ನಾಂಡೀಸ್, ಪುತ್ರ ಓಶಾನ್ ಫರ್ನಾಂಡೀಸ್, ಪುತ್ರಿ ಓಶೀನ್ ಫರ್ನಾಂಡೀಸ್ ಸೇರಿದಂತೆ ಕುಟುಂಬ ವರ್ಗ, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಅಗಲಿದ ನಾಯಕನಿಗೆ ಅಂತಿಮ ವಿದಾಯ ಹೇಳಿದರು. 

SCROLL FOR NEXT