ಮಂಗಳೂರು: ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ತಾನು ಕಲಿತಿದ್ದ ವಿದ್ಯಾಸಂಸ್ಥೆಗೆ ನುಗ್ಗಿ ಮೂವರು ಸಿಬ್ಬಂದಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಕುಂದಾಪುರ ಲಾ ಕೋರ್ಟ್ ನಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷದ ನವೀನ್ ಆರ್ ಶೆಟ್ಟಿ ಈ ಕೃತ್ಯ ಎಸಗಿರುವ ವ್ಯಕ್ತಿ. ಆತ ಕಲಿತಿದ್ದ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ (ಡಿಐಇಟಿ)ಗೆ ಸೆ.20 ರಂದು ಏಕಾ ಏಕಿ ನುಗ್ಗಿದ ನವೀನ್ ಶೆಟ್ಟಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಈ ಘಟನೆ ಬಗ್ಗೆ ಮಾತನಾಡಿದ್ದು, ಆರೋಪಿ ಶೆಟ್ಟಿ, ಜೈಲ್ ರಸ್ತೆಯಲ್ಲಿರುವ ಡಿಐಇಟಿ ಕಟ್ಟಡದಲ್ಲಿದ್ದ ಕಚೇರಿಗೆ ಮಧ್ಯಾಹ್ನ 12:45ಕ್ಕೆ ಪ್ರವೇಶಿಸಿದ್ದು ತನ್ನನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ನಿರ್ದಿಷ್ಟ ಮಹಿಳಾ ಪ್ರಾಧ್ಯಾಪಕಿಯನ್ನು ಭೇಟಿ ಮಾಡಿ ಉಡುಗೊರೆ ನೀಡಬೇಕೆಂದು ಹೇಳಿದ್ದಾನೆ.
ಆದರೆ ಅದೃಷ್ಟವಶಾತ್ ಆ ಪ್ರಾಧ್ಯಾಪಕಿ ತಪಾಸಣೆ ಕೆಲಸದ ನಿಮಿತ್ತ ದೂರ ಇದ್ದರು. ಇದರಿಂದ ಕೋಪಗೊಂಡ ಶೆಟ್ಟಿ, ತಕ್ಷಣವೇ ಬ್ಯಾಗ್ ನಿಂದ ಮಚ್ಚನ್ನು ಹೊರತೆಗೆದು ಎಫ್ ಡಿಎ, ಸ್ಟೆನೋಗ್ರಾಫರ್ ಹಾಗೂ ಗ್ರೂಪ್ ಡಿ ನೌಕರರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮೂವರ ತಲೆ, ಮುಖ ಹಾಗೂ ಅಂಗೈಗಳಿಗೆ ಬಲವಾದ, ಆಳವಾದ ಗಾಯಗಳಾಗಿವೆ.
ಈ ಕಟ್ಟಡದಿಂದ ಚೀರಾಟ ಕೇಳಿದ, ಹತ್ತಿರದಲ್ಲೇ ಇದ್ದ ಪೊಲೀಸ್ ಹಾಗೂ ಜೈಲು ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಪಂಚಾಯತ್ ಸಿಇಒ ಕುಮಾರ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತನಿಖೆ ವೇಳೆ ಶೆಟ್ಟಿ, ನಾನು ಹುಡುಕುತ್ತಿದ್ದ ಪ್ರಾಧ್ಯಾಪಕಿ ನಾನು 2012-13 ರಲ್ಲಿ ಡಿ.ಇಡ್ ವಿದ್ಯಾರ್ಥಿಯಾಗಿದ್ದಾಗ, ಅವಮಾನ ಆಗುವಂತೆ ಮಾಡಿದ್ದರು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ತನ್ನ ವಿರುದ್ಧ ಆಕೆ ಹಾಗೂ ಮತ್ತೋರ್ವ ವಿದ್ಯಾರ್ಥಿ ವಾಮಾಚಾರ ಪ್ರಯೋಗ ಮಾಡಿದ್ದಾರೆಂದೂ ನವೀನ್ ಆರೋಪಿಸಿದ್ದಾನೆ.
ಈ ಘಟನೆಗೂ ಮುನ್ನ ನವೀನ್ ಕಾಲೇಜು ಕ್ಯಾಂಪಸ್ ನ ಬಳಿ ಈ ಹಿಂದೆ ಹಲವು ಬಾರಿ ಆ ಪ್ರಾಧ್ಯಾಪಕಿಯ ಬಗ್ಗೆ ವಿಚಾರಿಸಿದ್ದನ್ನು ಗಮನಿಸಿದ್ದಾರೆ. ವೈದ್ಯರ ಪ್ರಕಾರ ನವೀನ್ ಶೆಟ್ಟಿಗೆ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ಎಂಬ ಸಮಸ್ಯೆ ಇದ್ದು 2012-15 ರ ನಡುವೆ 5 ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ಮಾಹಿತಿಯೂ ಈಗ ಬರಹಿಂಗವಾಗಿದೆ. ಸೆ.20 ರ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.