ರಾಜ್ಯ

ಗೋದಾಮು ಸ್ಫೋಟ ಪ್ರಕರಣ: ಜೀವದ ಹಂಗು ತೊರೆದು ಇತರರ ಜೀವ ಉಳಿಸಿ ಮಾನವೀಯತೆ ಮೆರೆದ ಜನತೆ!

Manjula VN

ಬೆಂಗಳೂರು: ನಗರದ ದೇವರಚಿಕ್ಕನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ಮರೆಯುವ ಮುನ್ನವೇ ಗುರುವಾರ ಪಟಾಕಿ ಗೋದಾಮು ಒಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಗೋದಾಮಿನ ಇತರ 76 ಬಾಕ್ಸ್ ಗಳಲ್ಲಿದ್ದ ಅಪಾರ ಪ್ರಮಾಣದ ಪಟಾಕಿ ಸ್ಫೋಟವಾಗದ ಕಾರಣ ಬಹುದೊಡ್ಡ ದುರಂತ ತಪ್ಪಿದಂತಾಗಿದೆ. 

ಈ ನಡುವೆ ಸ್ಫೋಟ ಸಂಭವಿಸಿದ ಸ್ಥಳದ ಸುತ್ತಲೂ ಹೊಗೆ ತುಂಬಿಕೊಂಡಿದ್ದರೂ ಜೀವದ ಹಂಗು ತೊರೆದು ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ಮುಂದಾಗಿದ್ದರು. ಈ ಮೂಲಕ ಮಾನವೀಯತೆ ಮೆರೆದಿದ್ದರು. 

ಸ್ಫೋಟ ಸಂಭವಿಸಿದ ಗೋದಾಮಿನ ಪಕ್ಕದ ಕಟ್ಟದಲ್ಲಿ ಸುಜಾತ ಎಂಬುವವರು ನೆಲೆಸಿದ್ದು, ಘಟನೆ ಸಂಭವಿಸಿದ ಸಂದರ್ಭದಲ್ಲಿ ಸುಜಾತ ಅವರು ದಿನಸಿ ಸಾಮಾಗ್ರಿ ತರುವ ಸಲುವಾಗಿ ಹೊರಗೆ ಬಂದಿದ್ದರು. ಸುಜಾತ ಅವರ ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ ವೃದ್ಧ ಮಹಿಳೆಯಿದ್ದಾರೆ. ಸುಜಾತ ಅವರು ಹೊರಗೆ ಬಂದ ಕೆಲವೇ ನಿಮಿಷಗಳಲ್ಲಿ ಮನೆಯ ಸುತ್ತಲೂ ಹೊಗೆ ಆವರಿಸಿಕೊಂಡಿರುವುದು ಕಂಡು ಬಂದಿದೆ. 

ಸ್ಥಳದ ವಾತಾವರಣ ನೋಡಿ ಸಾಕಷ್ಟು ಭಯವಾಗಿತ್ತು. ನನ್ನ ಮಕ್ಕಳು ಹಾಗೂ ತಾಯಿ ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. ಮನೆಯ ಕಿಟಕಿ ಗಾಡುಗಳು ಪುಡಿ ಪುಡಿಯಾಗಿತ್ತು. ಎಲ್ಲೆಲ್ಲೂ ಗಾಜು ಒಡೆದು ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಟೀ ಅಂಗಡಿ ಬಳಿಯಿದ್ದ ಇಬ್ಬರು ವ್ಯಕ್ತಿಗಳು ನೆರವಿಗೆ ಧಾವಿಸಿದ್ದರು. ಬಳಿಕ ಮಕ್ಕಳು ಹಾಗೂ ತಾಯಿಯನ್ನು ರಕ್ಷಣೆ ಮಾಡಿದ್ದರು. ಸೂಕ್ತ ಸಮಯಕ್ಕೆ ಜನರು ಸಹಾಯಕ್ಕೆ ಧಾವಿಸದೇ ಹೋಗಿದ್ದರೆ, ಪರಿಸ್ಥಿತಿ ಮತ್ತಷ್ಟು ಕಠಿಣವಾಗಿರುತ್ತಿತ್ತು ಎಂದು ಹೇಳಿದ್ದಾರೆ. 

ಸಹಾಯಕ್ಕೆ ಬಂದ ವ್ಯಕ್ತಿಗಳು ಯಾರೆಂಬುದೇ ನನಗೆ ಗೊತ್ತಿರಲಿಲ್ಲ. ಅವರಿಗೆ ಯಾವ ರೀತಿ ಧನ್ಯವಾದ ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ. 

ಇದೇ ಕಟ್ಟಡದಲ್ಲಿ ನೆಲೆಸಿರುವ ಮತ್ತೊಬ್ಬ ವ್ಯಕ್ತಿ ಆನಂದ್ ಬಿಎನ್ ಎಂಬುವವರು ಮಾತನಾಡಿ, ಘಟನೆ ಕುರಿತು ಸುದ್ದಿ ಕೇಳುತ್ತಿದ್ದಂತೆಯೇ ಕುಸಿದು ಬಿದ್ದಿದ್ದೆ. ದೇವರಚಿಕ್ಕನಹಳ್ಳಿಯಲ್ಲಿ ಸಂಭವಿಸಿದ ಸ್ಫೋಟ ನೆನಪಿಗೆ ಬಂದಿತ್ತು. ಬಳಿಕ ನನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಮನೆಗೆ ಹೋಗಲು ಸಹಾಯ ಮಾಡಿದ್ದರು. ನನ್ನ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಸುರಕ್ಷಿತವಾಗಿರುವುದನ್ನು ನೋಡಿದ ಬಳಿಕವೇ ನನಗೆ ಸಮಾಧಾನವಾಗಿತ್ತು ಎಂದು ಹೇಳಿದ್ದಾರೆ. 

ಸ್ಫೋಟದಲ್ಲಿ ಛಿದ್ರಗೊಂಡಿದ್ದ ಇಬ್ಬರ ಮೃತದೇಹಗಳನ್ನು ಆ್ಯಂಬುಲೆನ್ಸ್ ನಲ್ಲಿ ಸ್ಥಳಾಂತರಿಸಿದ್ದ ದೇವರಾಜ್ ಬಿ ಎಂಬುವವರು ಮಾತನಾಡಿ, ಆರಂಭದಲ್ಲಿ ದೇಹಗಳ ಸ್ಥಿತಿ ನೋಡಿ ಆತಂಕಗೊಂಡಿದ್ದೆ. ದೇಹದಿಂದ ಕೈ ಕಾಲುಗಳು ಬೇರ್ಪಟ್ಟಿದ್ದವು. ಪೊಲೀಸರು ಸ್ಥಳಕ್ಕೆ ಬಂದ ಬಳಿಕ ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಇರಿಸಿದ್ದೆವು ಎಂದಿದ್ದಾರೆ. 

ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿ ಮಂಜುನಾಥ್ ಅವರ ತಂದೆ ಮಾತನಾಡಿ, ಜಿಮ್ ಗೆ ಹೋಗುವ ಸಲುವಾಗಿ ನನ್ನ ಮಗ ಬೈಕ್ ತೆಗೆಯಲು ಕೆಳಗೆ ಹೋಗಿದ್ದ. ನಾನು ಕಟ್ಟಡದ ಮೊದಲನೇ ಮಹಡಿಯಲ್ಲಿದ್ದೆ. ಈ ವೇಳೆ ಸ್ಫೋಟದ ಶಬ್ಧ ಕೇಳಿಸಿತ್ತು. ಘಟನೆಯಲ್ಲಿ ನನ್ನ ಮಗನ ತಲೆ ಹಾಗೂ ಕಾಲುಗಳಿಗೆ ಗಾಯವಾಗಿದೆ. ಐಸಿಯುವಿನಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT