ರಾಜ್ಯ

ಅಕ್ಟೋಬರ್ 2 ರಂದು ಗುಜರಾತ್ ನಲ್ಲಿ ಶೆಪರ್ಡ್ ಇಂಡಿಯಾ 6ನೇ ವಾರ್ಷಿಕೋತ್ಸವ: ಎ.ಹೆಚ್.ವಿಶ್ವನಾಥ್

Manjula VN

ಬೆಂಗಳೂರು: ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್'ನ 6ನೇ ವಾರ್ಷಿಕೋತ್ಸವ ಸಮಾರಂಭ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಬುಧವಾರ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2015 ರಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್'ನ್ನು ಸ್ಥಾಪಿಸಲಾಯಿತು. ಭಾರತದ ಬೇರೆ ಬೇರೆ ಕಡೆ ಇರುವ ಕುರುಬ ಸಮುದಾಯವನ್ನು ಒಂದುಗೂಡಿಸಲು ಇದರ ಸ್ಥಾಪನೆಯಾಯಿತು. ಅಂದಿನಿಂದ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಕುರುಬ ಸಮುದಾಯ ಒಂದುಗೂಡಿಸಲು ಶ್ರಮಿಸುತ್ತಿದೆ. ಭಾರತದ ಇತರೆ ಭಾಗಗಳಲ್ಲಿ 12 ಕೋಟಿ ಕುರುಬರು ಇದ್ದಾರೆ. ಅವರೆಲ್ಲರೂ ವಿವಿಧ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ. ಆ ಎಲ್ಲರನ್ನೂ ಒಂದೇ ವೇದಿಕೆಗೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಮುಂದಿನ ಆಕ್ಟೋಬರ್ 2 ರಂದು ಗುಜರಾತಿನಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್  ವಾರ್ಷಿಕೋತ್ಸವದ ಸಮಾವೇಶ ನಡೆಯುತ್ತಿದೆ. ಅಕ್ಟೋಬರ್ 2 ರಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಗಗನ್ ಸಿಂಗ್ ಕುಲಸ್ತೆ, ಎಸ್ ಪಿ ಸಿಂಗ್ ಬಘೇಲ್, ಮಹಾರಾಷ್ಟ್ರ ರಾಜ್ಯ ಸಚಿವ ದತ್ತಾತ್ರೇಯ ಭರಣಿ, ಗುಜರಾತ್ ರಾಜ್ಯ ವಿಧಾನಸಭೆ ಉಪ ಸ್ಪೀಕರ್  ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ದೆಹಲಿ ಶಾಸಕ ಮೊಂಗಿಯಾ, ರಾಜಸ್ಥಾನ ಶಾಸಕ ರತನ್ ದೇವಸಿ, ತೆಲಂಗಾಣ ಎಂಎಲ್‌ಸಿ ಯೆಗೆ ಮಲ್ಲೇಶಮ್ ಸೇರಿದಂತೆ ಇನ್ನಿತರೆ ರಾಜ್ಯಗಳ ರಾಜಕೀಯ ಮುಖಂಡರೂ ಕೂಡ ಭಾಗವಹಿಸಿಲಿದ್ದಾರೆ. ರಾಜ್ಯದಿಂದ ನಾನು, ಬಂಡಪ್ಪ ಕಾಶೆಂಪುರ್, ರೇವಣ್ಣ , ಮಲ್ಕಾಪುರೆ  ಸೇರಿದಂತೆ ಹಲವರು ಭಾಗವಹಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. 

ಪಾಶ್ಚಿಮಾತ್ಯ ದೇಶಗಳಲ್ಲಿಯೂ ಶೆಪಡ್ರ್ಸ್ ಹೆಸರಿನಿಂದ ಕುರುಬರು ಇದ್ದಾರೆ. ಈಜಿಪ್ಟ್‍ನ ಕೈರೋ ನಗರದಲ್ಲಿ ಕುರುಬರ ಜಾತ್ರೆ ನಡೆದಿದೆ. ನೈಲ್ ನದಿಯ ಉದ್ದಕ್ಕೂ ಕುರುಬರ ಸಂಸ್ಕೃತಿಯನ್ನು ಕಾಣುತ್ತೇವೆ. ಅವರಿಗೆ ಸರಕಾರದಿಂದ ಎಲ್ಲಾ ಸವಲತ್ತು ಸಿಗುತ್ತಿದೆ. ಆದರೆ ಅವರಿಗೆ ಹೋಲಿಸಿಕೊಂಡರೆ ನಮ್ಮ ದೇಶದ ಕುರುಬರಿಗೆ ಸರಕಾರದಿಂದ ಒಳ್ಳೆಯ ಸವಲತ್ತು ಸಿಗುತ್ತಿಲ್ಲ. ಆದ್ದರಿಂದ ಈ ಸಮಾವೇಶವನ್ನು ಏರ್ಪಡಿಸಲಾಗಿದೆ. ಅಲ್ಲಿ ಈ ಕುರಿತು ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ರಾಜ್ಯಾಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

SCROLL FOR NEXT