ರಾಜ್ಯ

ಸಿದ್ದರಾಮಯ್ಯ ಅವರದ್ದು ಬಾಬರ್‌, ಘಜಿನಿ ಆಡಳಿತವಾಗಿತ್ತೇ ಹೊರತು ಶಾಂತಿಯದ್ದಲ್ಲ: ಕಾಂಗ್ರೆಸ್ ಜಾಹಿರಾತಿಗೆ ಬಿಜೆಪಿ ಕಿಡಿ

Ramyashree GN

ಬೆಂಗಳೂರು: ‘ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ-75 ಕಾರ್ಯಕ್ರಮವು ಇದೀಗ ಟೀಕೆಗೆ ಗುರಿಯಾಗಿದೆ. ಕಾರ್ಯಕ್ರಮದ ಅಂಗವಾಗಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಎಂದು ವಿವಿಧ ಪತ್ರಿಕೆಗಳಿಗೆ ನೀಡಿರುವ ಜಾಹಿರಾತಿನ ವಿರುದ್ಧ ಬಿಜೆಪಿ ಕಿಡಿಕಾರಿದೆ. ಸಿದ್ದರಾಮೋತ್ಸವವನ್ನು ಕಾಂಗ್ರೆಸ್ ಅಂತ್ಯೋತ್ಸವ  ಎಂದೂ ಬಣ್ಣಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸರ್ವಜನಾಂಗದ ಶಾಂತಿಯ ತೋಟವಂತೆ, ಸಿದ್ದರಾಮಯ್ಯನವರೇ ಎಲ್ಲಿತ್ತು ಶಾಂತಿ? ನೀವೇ ನೀಡಿದ ಲೆಕ್ಕದ ಪ್ರಕಾರ ನೀವು ಸಿಎಂ ಆಗಿದ್ದಾಗಿನ ಕಾಲದ ಮೂರು ವರ್ಷದಲ್ಲಿ 23 ಕೊಲೆ ನಡೆದಿದ್ದವು. ಅದು ಕೂಡಾ ದ್ವೇಷದ ಕೊಲೆ. ಸಿದ್ದರಾಮಯ್ಯ ಅವರದ್ದು ಬಾಬರ್‌, ಘಜಿನಿ ಆಡಳಿತವಾಗಿತ್ತೇ ಹೊರತು ಶಾಂತಿಯದ್ದಲ್ಲ. #ಕಾಂಗ್ರೆಸ್‌ಅಂತ್ಯೋತ್ಸವ ಎಂದು ಟೀಕಿಸಿದೆ.

ಸಾಮಾಜಿಕ ನ್ಯಾಯದ ಹರಿಕಾರ ಎಂದು ಸಮಾಜವನ್ನು ಒಡೆದು ಹಾಕಿದ್ದು ಸಿದ್ದರಾಮಯ್ಯ ಅವರ ಸಾಧನೆಯೇ? ಸಿದ್ದರಾಮಯ್ಯ ಧರ್ಮ ವಿಭಜನೆ, ಜಾತಿ ವಿಭಜನೆಯ ಹರಿಕಾರ. ಸಿದ್ದರಾಮಯ್ಯ ಅವರ ವಿಭಜನೆ ಆಧಾರಿತ ಅಭಿವೃದ್ಧಿ ತಿಳಿದುಕೊಳ್ಳಲು ಶಾದಿಭಾಗ್ಯ ಯೋಜನೆಯೊಂದೇ ಸಾಕು! ಎಂದು ಜಾಹಿರಾತಿನಲ್ಲಿ ಪ್ರಕಟವಾಗಿರುವ ಪ್ರತಿಯೊಂದು ಬರಹದ ಸಾಲಿಗೂ ಕಿಡಿಕಾರಿದೆ.

ಹಸಿದವರ ಹೊಟ್ಟೆಗೆ ಅನ್ನದ ಭಾಗ್ಯವಾದೆ ಎಂದು ಸಿದ್ದರಾಮಯ್ಯ  ಅವರು ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಿಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ದುಡ್ಡು ಕೊಟ್ಟಿದ್ದನ್ನು ಮುಚ್ಚಿಟ್ಟು ತನ್ನ ಜೇಬಿನಿಂದ ದುಡ್ಡು‌ ಕೊಟ್ಟಂತೆ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದೆ.

ದುರ್ಬಲರ ಪಾಲಿನ ಭರವಸೆಯ ಶಕ್ತಿ ಎಂದು ಬಿಂಬಿಸಿಕೊಳ್ಳುವ ಮುನ್ನ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ತಲೆ ಮೇಲೆ ಹೊರಿಸಿದ ಋಣಭಾರದ ಬಗ್ಗೆಯೂ ಮಾತನಾಡಬೇಕು. 1 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಪ್ರಜೆಗಳ ಮೇಲೆ ಹೊರಿಸಿ ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸಿದ್ದು ನಿಮ್ಮ ಸಾಧನೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಕೊಡುವುದಾಗಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದರು. ಅದೇ ಸಿದ್ದರಾಮಯ್ಯ ಇಂದು ಪತ್ರಿಕೆಗಳಲ್ಲಿ ನೇಗಿಲ ಯೋಗಿಗೆ ಜಲಭಾಗ್ಯದ ಭಗೀರಥನಾದೆ ಎಂದು ಬೊಗಳೆ ಬಿಡುತ್ತಿರುವುದು ಹಾಸ್ಯಾಸ್ಪದವಲ್ಲವೇ? ಎಂದು ವ್ಯಂಗ್ಯವಾಡಿದೆ.

SCROLL FOR NEXT