ರಾಜ್ಯ

ಆಗಸ್ಟ್ 10 ರಂದು ರಾಜ್ಯ ಸಚಿವ ಸಂಪುಟ ಸಭೆ: ಮಳೆ ಹಾನಿ ಕುರಿತು ಮಹತ್ತರ ಚರ್ಚೆ!

Shilpa D

ಬೆಂಗಳೂರು: ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಕೃಷಿ, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಆಗಿರುವ ವ್ಯಾಪಕ ಹಾನಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಲು ಆಗಸ್ಟ್ 10 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.

ಜೂನ್ ಮೊದಲ ವಾರ ಮತ್ತು ಜುಲೈ 16 ರ ನಡುವೆ 5,771 ಹೆಕ್ಟೇರ್ ಕೃಷಿ ಭೂಮಿ ಮತ್ತು ಜುಲೈ 16 ಮತ್ತು ಆಗಸ್ಟ್ ಎರಡನೇ ವಾರದ ನಡುವೆ 10,984 ಹೆಕ್ಟೇರ್ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾಗಿದೆ ಎಂದು ರಾಜ್ಯದ್ಯಾಂತ ಮಳೆ ಸಮೀಕ್ಷೆ ನಡೆಸಿದ ತಂಡಗಳು ಅಧಿಕೃತ ಮಾಹಿತಿ ನೀಡಿವೆ.

ಈ ವರ್ಷ ಸುಮಾರು 370 ಭೂ ಕುಸಿತಗಳು ಸಂಭವಿಸಿದೆ,  3,600 ಕಿಮೀ ರಸ್ತೆಗಳು ಮತ್ತು 650 ಸೇತುವೆಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ, ಇದರ ಜೊತೆಗೆ 16,000 ಮನೆಗಳು ಹಾನಿಗೊಳಗಾಗಿವೆ, 400 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಮೂಲ ಸೌಕರ್ಯ ತಂಡಗಳು ನೀಡಿದ ವರದಿಯಲ್ಲಿ ತಿಳಿಸಿವೆ.

ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಂದ ಸಂತ್ರಸ್ತ ಜನರನ್ನು ಶಾಲಾ-ಕಾಲೇಜುಗಳಂತಹ ಸರ್ಕಾರಿ ಸಂಸ್ಥೆಗಳಿಗೆ ಸ್ಥಳಾಂತರಿಸಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ವಿಪತ್ತು ನಿರ್ವಹಣಾ ಆಯುಕ್ತ ಮನೋಜ್ ರಾಜನ್ ಮಳೆ ಸಂಬಂಧಿತ ಹಾನಿಗಳ  ಬಗ್ಗೆ ನಿಗಾ ಇಟ್ಟಿದ್ದಾರೆ. ಹಲವು ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಅಂಗನವಾಡಿಗಳು ಹಾನಿಗೊಳಗಾಗಿವೆ ಎಂದು ವರದಿ ತಿಳಿಸಿದೆ. ಆದರೆ ನಿಜವಾದ ಸಂಖ್ಯೆಗಳು ಹೆಚ್ಚು ಇರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT