ರಾಜ್ಯ

ಹೇರ್ ಕೇರ್ ಸೆಲೂನ್ ಮತ್ತು ಸ್ಪಾ ಎಕ್ಸ್ ಪೋಗೆ ವಸತಿ ಸಚಿವ ಸೋಮಣ್ಣ ಚಾಲನೆ: ಆ.9ರವರೆಗೆ ಪ್ರದರ್ಶನ

Sumana Upadhyaya

ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ ನಲ್ಲಿ ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮ‌ ನಿಯಮಿತದಿಂದ ಆಯೋಜಿಸಲಾಗಿದ್ದ ಹೇರ್ ಕೇರ್ ಸಲೂನ್  ಮತ್ತು ಸ್ಪಾ ಎಕ್ಸ್ ಪೋ ಕಾರ್ಯಕ್ರಮವನ್ನು ನಿನ್ನೆ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ಹೊಂದಿರುವ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ  ಎಸ್.ನರೇಶ್ ಕುಮಾರ್, ಚಲನಚಿತ್ರ ನಟಿ, ಕೆಎಫ್ ಡಿಸಿ ಅಧ್ಯಕ್ಷೆ ಶ್ರೀಮತಿ ತಾರಾ ಅನುರಾಧಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

ಕೇಶ ರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉತ್ಪಾದನೆ ಪಾರ್ಕ್: ದೇಶದಲ್ಲಿಯೇ ಪ್ರಥಮ ಬಾರಿಗೆ ಕೇಶ ರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉತ್ಪಾದನೆ ಪಾರ್ಕ್ ಸ್ಥಾಪಿಸಲು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸವಿತಾ ಸಮಾಜ ನಿರ್ಧರಿಸಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ನರೇಶ್ ಕುಮಾರ್ ತಿಳಿಸಿದ್ದಾರೆ.

ಅಂದಾಜು 300 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಸ್ಮೆಟಿಕ್ ಪಾರ್ಕ್ ಸ್ಥಾಪನೆಗೆ 150 ಎಕರೆ ಜಾಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇತ್ತೀಚಿನ ದಿನಗಳಲ್ಲಿ ಕ್ಷೌರ ಅಥವಾ ಕೇಶ ವಿನ್ಯಾಸ ಉದ್ಯಮವನ್ನು ಮತ್ತಷ್ಟು ಉತ್ತೇಜಿಸಿ ಅಭಿವೃದ್ಧಿಪಡಿಸಲು ವಿಶೇಷ ವಲಯ ಸ್ಥಾಪಿಸಲು ಅಗತ್ಯವಿದೆ. ಉತ್ಪಾದನಾ ಪಾರ್ಕ್ ನಲ್ಲಿ ಕೇಶ ಸಂಗ್ರಹಣಾ ಬ್ಯಾಂಕ್, ರಫ್ತು ಉತ್ತೇಜನ ಹಾಗೂ ರಾಷ್ಟ್ರೀಯ ಮಟ್ಟದ ತರಬೇತಿ ಅಕಾಡೆಮಿ ಸೇರಿ ಇತರೆ ಸೌಲಭ್ಯಗಳು ಇರಲಿವೆ ಎಂದು ವಿವರಿಸಿದರು.

ಕೇಶ ಮತ್ತು ಸೌಂದರ್ಯವರ್ಧಕ ಪ್ರದರ್ಶನ: ಕೇಶ ಆರೈಕೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಿಗೆ ಸಂಬಂಧಿತ ವಸ್ತುಗಳ ಪ್ರದರ್ಶನ ನಿನ್ನೆಯಿಂದ ಆಗಸ್ಟ್ 9ರವರೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನ ಹತ್ತಿರವಿರುವ ಮ್ಯಾನ್ ಪೋ ಕನ್ವೆನ್ಷನ್ ಸೆಂಟರ್ ನಲ್ಲಿ ಕೇಶ ಆರೈಕೆ ಸಲೂಲ್ ಮತ್ತು ಸ್ಪಾ ವಸ್ತು ಪ್ರದರ್ಶನ ನಡೆಯುತ್ತಿದೆ.

ಪುರುಷರು ಮತ್ತು ಮಹಿಳೆಯರ ಕೇಶ ಆರೈಕೆ ಮತ್ತು ಸೌಂದರ್ಯವರ್ಧನೆಗೆ ಬೇಕಾದ ಹೊಸ ವಿಧಾನಗಳು, ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ನರೇಶ್ ಕುಮಾರ್ ತಿಳಿಸಿದ್ದಾರೆ.

SCROLL FOR NEXT