ರಾಜ್ಯ

ಅಗತ್ಯ ವಸ್ತುಗಳ ಬೆಲೆ ಏರಿಕೆ: ಪ್ರತಿಭಟನೆಗೆ ವಿರೋಧ ಪಕ್ಷಗಳು ಸಜ್ಜು

Sumana Upadhyaya

ಬೆಂಗಳೂರು: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಆಗಾಗ ಚರ್ಚೆಗಳು ಆಗುತ್ತಿರುತ್ತದೆ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದೂ ಆಗಿದೆ. 

ಇಷ್ಟಕ್ಕೇ ನಿಲ್ಲಿಸದೆ ವಿರೋಧ ಪಕ್ಷಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಿವೆ. ನಾಡಿದ್ದು  ಸ್ವಾತಂತ್ರ್ಯ ದಿನಾಚರಣೆ ಮೆರವಣಿಗೆ ಸಾಗಿದ ನಂತರ ಸಭೆ ನಡೆಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಬೆಲೆ ಏರಿಕೆಯಿಂದ ಜನರು ತೀವ್ರ ಬಳಲುತ್ತಿದ್ದಾರೆ.2013ರಿಂದೀಚೆಗೆ ಎಲ್ ಪಿಜಿ ಸಿಲಿಂಡರ್ ಬೆಲೆ 700 ರೂಪಾಯಿ, ಡೀಸೆಲ್ ದರ 50 ರೂಪಾಯಿಗೂ ಅಧಿಕ ಮತ್ತು ಪೆಟ್ರೋಲ್ ದರ 35-40 ರೂಪಾಯಿ ಹೆಚ್ಚಾಗಿದೆ ಎಂದರು. 

ಅಕ್ಕಿ ಮತ್ತು ಬೇಳೆಕಾಳುಗಳ ಬೆಲೆ ಶೇಕಡಾ 25 ಮತ್ತು ಖಾದ್ಯ ತೈಲ ಶೇಕಡಾ 130 ರಷ್ಟು ಏರಿಕೆಯಾಗಿದೆ. ಅಕ್ಕಿ, ಬೇಳೆ, ಮೊಸರು, ಮಜ್ಜಿಗೆ, ತೆಂಗಿನಕಾಯಿ ನೀರಿಗೂ ಮೋದಿ ಸರಕಾರ ತೆರಿಗೆ ವಿಧಿಸುತ್ತಿದೆ. ಬ್ರಿಟಿಷರು ಕೂಡ ಹಾಗೆ ಮಾಡಿರಲಿಲ್ಲ ಎಂದು ಟೀಕಿಸಿದರು. 

ಆಮ್ ಆದ್ಮಿ ಪಾರ್ಟಿಯ ಪೃಥ್ವಿ ರೆಡ್ಡಿ, ಮಜ್ಜಿಗೆ, ಮೊಸರು ಮತ್ತು ಇತರ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಿರುವ ಕೇಂದ್ರ ಸರ್ಕಾರದ ಕ್ರಮ ಅಮಾನವೀಯವಾಗಿದೆ ಎಂದು ಟೀಕಿಸಿದ್ದಾರೆ.

SCROLL FOR NEXT