ರಾಜ್ಯ

ಗಣೇಶೋತ್ಸವ: ಸಮರ್ಪಕ ಸಿದ್ಧತೆ, ಮುಂಜಾಗ್ರತೆಗೆ ಸಚಿವ ಅಶ್ವತ್ಥ ನಾರಾಯಣ ಸೂಚನೆ

Shilpa D

ಬೆಂಗಳೂರು: ಈ ಬಾರಿಯ ಗಣೇಶೋತ್ಸವದ ಸಂದರ್ಭದಲ್ಲಿ ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ಮತ್ತು ಸ್ಯಾಂಕಿ ಕೆರೆಯ ನಿರ್ವಹಣೆ ಇತ್ಯಾದಿಗಳೆಲ್ಲ ಸುಗಮವಾಗಿ ನಡೆಯುವಂತೆ ಬಿಬಿಎಂಪಿ, ಪೊಲೀಸ್ ಮತ್ತು ಅಗ್ನಿಶಾಮಕ ಪಡೆಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ.

ಮಲ್ಲೇಶ್ವರದ ಜಲಮಂಡಲಿ ಕಚೇರಿಯಲ್ಲಿ ಈ ಸಂಬಂಧ ಅವರು ಅಧಿಕಾರಿಗಳ ಸಭೆ ನಡೆಸಿದರು. ಈ ಸಲ ಸಾರ್ವಜನಿಕರು ತಮ್ಮ ಮನೆ ಹಾಗೂ ಹೊರ ಭಾಗದಲ್ಲಿ ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವ ಸಂಬಂಧ ಜನ ಜಾಗೃತಿ ಮೂಡಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸೂಚಿಸಿದರು.

ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸ್ಯಾಂಕಿ ಕೆರೆ ಪರಿಸರದಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಇದನ್ನು ತಡೆಯಲು ಮೊದಲ ಮೂರು ದಿನ ಭಾಷ್ಯಂ ವೃತ್ತದಿಂದ ಸ್ಯಾಂಕಿ ಕೆರೆಯ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಹೂವು ಮತ್ತು ಇತರ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇದನ್ನು ಕೂಡಲೇ ತೆರವುಗೊಳಿಸಬೇಕು. ಇದಕ್ಕಾಗಿ ದೊಡ್ಡ ಗಾತ್ರದ ಕಸದ ಡಬ್ಬಗಳನ್ನು ಇಡಬೇಕು. ಜತೆಗೆ ನುರಿತ ಈಜುಗಾರರು ಸ್ಥಳದಲ್ಲಿ ಸಜ್ಜಾಗಿರುವಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ನಿಗಾವಹಿಸಬೇಕು ಎಂದು ಸಚಿವರು ನಿರ್ದೇಶಿಸಿದರು. ಸಭೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಎಸಿಪಿಗಳು, ಪೊಲೀಸ್ ಇನ್ಸ್ ಪೆಕ್ಟರುಗಳು, ಬಿಬಿಎಂಪಿ ಎಂಜಿನಿಯರ್ ಗಳು ಇದ್ದರು.

SCROLL FOR NEXT