ರಾಜ್ಯ

ಕೊನೆಗೂ ಈಡೇರಿದ ದಶಕಗಳ ಬೇಡಿಕೆ: ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಮನೆಗೆ ತಾತ್ಕಾಲಿಕ ಸೇತುವೆ ನಿರ್ಮಾಣ!

Srinivasamurthy VN

ಹೊನ್ನಾಳಿ: 30 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ತುಳಸಜ್ಜಿ ಅಥವಾ ತುಳಸಿ ಗೌಡ ಅವರ ದಶಕಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅವರ ಮನೆಗೆ  ತಾತ್ಕಾಲಿಕ ಸೇತುವೆ ಮಾರ್ಗ ನಿರ್ಮಿಸಲಾಗಿದೆ.

ಹೊನ್ನಳ್ಳಿಯ ಪುಟ್ಟ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅಜ್ಜಿ ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರವನ್ನು ಪಡೆದಿದ್ದಾರೆ. ನವದೆಹಲಿಯ ರಾಷ್ಟ್ರಪತಿ ಭವನಕ್ಕೆ ಹಳ್ಳಿಯಿಂದ ಬರಿಗಾಲಲ್ಲಿ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದರು. ಎಷ್ಟೇ ದೊಡ್ಡ ಮಟ್ಟದ ಪ್ರಶಸ್ತಿ ಸ್ವೀಕರಿಸಿದರೂ ಬದುಕಲು ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ಪರದಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ಮನೆ ಮುಂದಿದ್ದ ಹಳ್ಳದ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತುಳಸಿಗೌಡ ಅವರ ಹೊನ್ನಾಳಿಯ ಮನೆ ಮುಂದೆ ಹಳ್ಳ ನಿರ್ಮಾಣವಾಗಿತ್ತು. ಹೀಗಾಗಿ ತುಳಸಿಗೌಡ ಕುಟುಂಬಸ್ಥರಿಗೆ ಇತರೆ ಪ್ರದೇಶಗಳಿಗೆ ಓಡಾಡಲು ಅಸಾಧ್ಯವಾಗಿತ್ತು. ಇದೇ ಕಾರಣಕ್ಕೆ ತುಳಸಿಗೌಡ ಅವರು ಸೇತುವೆ ನಿರ್ಮಾಣ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.  ಇದೀಗ ಸರ್ಕಾರ ಅವರ ಮನವಿಗೆ ಸ್ಪಂದಿಸಿದ್ದು ಅವರ ಮನೆ ಮುಂದೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದೆ. 

ತುಳಸಿ ಗೌಡ ಅವರು ದಶಕಗಳಿಂದ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯ ಹೊನ್ನಾಳಿಯಲ್ಲಿ ಎತ್ತರದ ಗುಡ್ಡದಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ಗುಡ್ಡದ ಕೆಳಗೆ ಹಳ್ಳ ತುಂಬಿ ಹರಿಯುತ್ತದೆ. ಇದರಿಂದ ಮುಖ್ಯರಸ್ತೆಯಿಂದ ಸಂಪರ್ಕ ಕಡಿದು ಹೋಗುತ್ತಿತ್ತು. ಇದೇ ಕಾರಣಕ್ಕೆ ತುಳಸಿಗೌಡ ಅವರು ತನ್ನ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳೊಂದಿಗೆ ತಮ್ಮ ದುಸ್ಥಿತಿ ತೋಡಿಕೊಂಡಿದ್ದರು. ಅಂಕೋಲಾದ ಹೊನ್ನಳ್ಳಿಯಲ್ಲಿರುವ ಇವರ ಮನೆ ಎದುರು ಹಳ್ಳವಿದ್ದು, ಇದಕ್ಕೆ ಸೇತುವೆ ನಿರ್ಮಿಸಿಲ್ಲ. ನಗರದ ಕಡೆಗೆ ಹೋಗಬೇಕೆಂದರೆ ತುಂಬಾ ಕಷ್ಟವಾಗುತ್ತದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳು ಕೂಡ ತೊಂದರೆ ಆಗುತ್ತದೆ. ಇನ್ನು ಮಕ್ಕಳು ಶಾಲೆಗೆ ತೆರಳಲು ತುಂಬಿದ ಹಳ್ಳವನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾರೂ ಕೂಡ ನಮಗೆ ಒಂದು ಸೇತುವೆಯನ್ನು ನಿರ್ಮಿಸಿಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅರ್ಧ ಗಂಟೆ ಮಳೆಯಾದರೂ ನಮ್ಮ ಮನೆವರೆಗೂ ನೀರು ಬರುತ್ತದೆ ಎಂದು ಅವರ ಮೊಮ್ಮಗ ಶೇಖರಗೌಡ ಹೇಳಿದ್ದರು.

ತುಳಸಜ್ಜಿಗೆ ಸ್ಪಂದಿಸಿ ಮಾತುಕೊಟ್ಟಿದ್ದ ಶಾಸಕಿ ರೂಪಾಲಿ ನಾಯ್ಕ 
ತುಳಸಜ್ಜಿ ಅಸಮಾಧಾನದ ಬೆನ್ನಲ್ಲೇ ಕಿರು ಸೇತುವೆಗೆ 25 ಲಕ್ಷ ರೂಪಾಯಿ ಹಾಗೂ ರಸ್ತೆಗೆ 15 ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ. ಮಳೆಗಾಲ ಮುಗಿದ ಮೇಲೆ ಸಂಪುರ್ಣ ಕಾಮಗಾರಿ ಪ್ರಾರಂಭಿಸಲಾಗುವುದು. ಮತ್ತು ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಕಿರು ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಭರವಸೆ ನೀಡಿದ್ದರು.

ಕೊಟ್ಟ ಮಾತು ಉಳಿಸಿಕೊಂಡ ಶಾಸಕಿ ರೂಪಾಲಿ ನಾಯ್ಕ
ಇದೀಗ ವೃಕ್ಷಮಾತೆ ಪದ್ಮಶ್ರೀ ತುಳುಸಿ ಗೌಡ ಅವರ ಮನೆಯ ಮುಂದೆ ಶಾಸಕಿ ರೂಪಾಲಿ ನಾಯ್ಕ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಅವರು ಕಾಲು ಸೇತುವೆ ನಿರ್ಮಿಸಿಕೊಡುವ ಮೂಲಕ ತುಳಸಜ್ಜಿಯ ಸಂತಸಕ್ಕೆ ಕಾರಣರಾಗಿದ್ದಾರೆ.  ಇದೀಗ ತುಳಸಿ ಗೌಡ ಅವರ ಮನೆಯ ಎದುರಿನ ಹಳ್ಳಕ್ಕೆ ತಾತ್ಕಾಲಿಕವಾಗಿ ಬಿದಿರು ಹಾಗೂ‌ ಮರದ ತುಂಡುಗಳಿಂದ ಚಿಕ್ಕ ಸೇತುವೆಯನ್ನು ನಿರ್ಮಿಸಿದ್ದಾರೆ. ಇದು ತುಳಸಿ ಗೌಡರ ಮುಖದಲ್ಲಿ ಸಂತೋಷ ತರಿಸಿದೆ. ನಿತ್ಯ ಮಕ್ಕಳು ಓಡಾಡುವಾಗ ಭಯ ಆಗುತ್ತಿತ್ತು. ಭಾರಿ ಮಳೆಯಲ್ಲಿ ಹಳ್ಳ ದಾಟಲು ಮಕ್ಕಳಿಗೆ ತುಂಬಾ ಕಷ್ಟವಾಗಿತ್ತು. ಇದೀಗ ನಮ್ಮ ಜಮೀನಿನಲ್ಲಿಯೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಟ್ಟಿರುವುದು ತುಂಬಾ ಸಹಕಾರಿ ಆಗಿದೆ. ಆದಷ್ಟು ಬೇಗ ಶಾಶ್ವತ ಸೇತುವೆಯನ್ನು ನಿರ್ಮಿಸಿಕೊಟ್ಟರೆ ತುಂಬಾ ಅನುಕೂಲವಾಗಲಿದೆ ಎಂದು ತುಳಸಿ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಸೇತುವೆ ಹಾಗೂ ರಸ್ತೆಗಾಗಿ ಮಾರ್ಚ್‌ 2022ರಲ್ಲೇ 40 ಲಕ್ಷ ರೂಪಾಯಿ ಮಂಜೂರಾಗಿದ್ದು, ಇದನ್ನು ತುಳಸಿ ಗೌಡ ಅವರ ಗಮನಕ್ಕೂ ತರಲಾಗಿತ್ತು. ಆದರೆ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ಆಗಿರಲಿಲ್ಲ. ಬಳಿಕ ಮಳೆ ಬಂದಿದ್ದರಿಂದ ಮತ್ತೆ ವಿಳಂಬವಾಯಿತು. ಹಳ್ಳ ತುಂಬಿ ಹರಿಯುತ್ತಿದ್ದ ಕಾರಣ ತುಳಸಿ ಗೌಡ ಅವರಿಗೆ ಬೇಸರವಾಗಿ ಅಸಹಾಯಕತೆ ತೋಡಿಕೊಂಡಿದ್ದರು. ಆದರೆ ಇದೀಗ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಡಲಾಗಿದ್ದು, ಇದು ಮಳೆಗಾಲದಲ್ಲಿ ಓಡಾಟಕ್ಕೆ ಅನುಕೂಲವಾಗಿದೆ. ಸೇತುವೆ ನಿರ್ಮಾಣಕ್ಕೆ ಖಾಸಗಿ ಜಮೀನು ಮಾಲೀಕರೊಬ್ಬರ ತಕರಾರಿದ್ದು, ಅದನ್ನು ಬಗೆಹರಿಸುವ ಪ್ರಯತ್ನವೂ ನಡೆದಿದೆ. ಇದು ಬಗೆಹರಿದ ಬಳಿಕ ಶಾಶ್ವತ ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕಿ ರೂಪಾಲಿಗೆ ಅಲ್ಲಿನ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.

“ನಾವು ಈಗ ತಾತ್ಕಾಲಿಕ ಸೇತುವೆಯನ್ನು ಪೂರ್ಣಗೊಳಿಸಿದ್ದೇವೆ. ಆದರೆ ಶಾಶ್ವತ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ. 45 ಲಕ್ಷ ಮಂಜೂರಾಗಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ್ ತಿಳಿಸಿದರು. “ಆದರೆ ಪಕ್ಕದ ಆಸ್ತಿ ಮಾಲೀಕರು ಸೇತುವೆ ಬರುತ್ತಿರುವ ಜಮೀನು ತನಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಮುಂಗಾರು ಮುಗಿದ ನಂತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.

SCROLL FOR NEXT