ರಾಜ್ಯ

'ಮಡಿಕೇರಿ ಚಲೋ' 'ಜನಜಾಗೃತಿ ಸಮಾವೇಶ' ನಡುವೆ ನಾಳೆಯಿಂದ 4 ದಿನ ಕೊಡಗಿನಲ್ಲಿ ನಿಷೇಧಾಜ್ಞೆ, ಮದ್ಯ ಮಾರಾಟ ನಿಷೇಧ!

Sumana Upadhyaya

ಮಡಿಕೇರಿ: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಮಳೆಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಕಪ್ಪು ಬಾವುಟ ಪ್ರದರ್ಶನ ಹಾಗೂ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಗಳು ನಡೆದಿದ್ದವು. 

ಇದಕ್ಕೆ ಸ್ವತಃ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ-ಕಾಂಗ್ರೆಸ್ ನಾಯಕರ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಅಷ್ಟಕ್ಕೇ ಸುಮ್ಮನಾಗದ ಕಾಂಗ್ರೆಸ್ ನಾಯಕರು ಇದೇ ಆಗಸ್ಟ್ 26ರಂದು ಮಡಿಕೇರಿ ಚಲೋ ಹಮ್ಮಿಕೊಂಡಿದ್ದಾರೆ. ಜಿಲ್ಲಾ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ನಿಷೇಧಾಜ್ಞೆ ಜಾರಿ: ಮಡಿಕೇರಿ ಚಲೋ ಪ್ರತಿಭಟನೆಗೆ ಇದೀಗ ಕಾಂಗ್ರೆಸ್ ನಾಯಕರಿಗೆ ಅಡ್ಡಿ ಆತಂಕ ಎದುರಾಗಿದೆ. ಸೆಕ್ಷನ್ 144 ಹೇರಿ ನಿಷೇಧಾಜ್ಞೆ ಜಾರಿ ಮಾಡಿ ಕೊಡಗು ಜಿಲ್ಲಾಧಿಕಾರಿ ನಾಳೆ ಆಗಸ್ಟ್ 24 ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ಸಾಯಂಕಾಲ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೆ ಈ ಎರಡು ದಿನ ಜಿಲ್ಲೆಯಲ್ಲಿ ಮದ್ಯ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ. 

ನಿಷೇಧಾಜ್ಞೆ ಜಾರಿಯಾದರೆ ಮಡಿಕೇರಿ ಚಲೋದಲ್ಲಿ 5 ಜನಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ.ಜನರು ಗುಂಪು ಸೇರುವಂತಿಲ್ಲ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ಕಾಂಗ್ರೆಸ್ ಮಡಿಕೇರಿ ಚಲೋ ನಡೆಸಿದರೆ ಬಂಧನವಾಗುವ ಸಾಧ್ಯತೆಯಿದೆ. 

ಜಾಗೃತಿ ಸಮಾವೇಶ: ಇನ್ನು ಆಗಸ್ಟ್ 26ರಂದು ಬಿಜೆಪಿ ಕೊಡಗಿನಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ಅಂದು ಬಿಜೆಪಿ-ಕಾಂಗ್ರೆಸ್ ಮುಖಾಮುಖಿಯಾಗುತ್ತಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪೂರ್ವ ನಿಗದಿಯಾಗಿರುವ ಖಾಸಗಿ ಕಾರ್ಯಕ್ರಮಗಳಿಗೆ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ.

SCROLL FOR NEXT