ರಾಜ್ಯ

ರಾಮನಗರದ ಮಳೆ ಬಾಧಿತ ಸ್ಥಳಗಳಿಗೆ ಸಿಎಂ ಬೊಮ್ಮಾಯಿ ಭೇಟಿ; ಎಚ್ ಡಿ ಕುಮಾರಸ್ವಾಮಿ ಸಾಥ್

Nagaraja AB

ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಮನಗರ ಜಿಲ್ಲೆಯ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರಾಮನಗರದ ಮಾರುತಿ ಬಡಾವಣೆಯಲ್ಲಿ ಭಕ್ಷಿಕೆರೆ ಒಡೆದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಯಾಗಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಕೆರೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭಕ್ಷಿಕೆರೆ ಒಡೆದು 100 ರಿಂದ 150 ಮನೆಗಳಿಗೆ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಭಕ್ಷಿಕೆರೆ ನಂತರ ರೈತರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಪರಿಹಾರದ ಭರವಸೆ ನೀಡಿದರು.  ಮಳೆಯಿಂದ ಕುಸಿದು ಬಿದ್ದಿರುವ ಮನೆಗಳಿಗೆ ತಕ್ಷಣ 1 ಲಕ್ಷ ರೂಪಾಯಿ ಹಾಗೂ ಒಟ್ಟಾರೇ 5 ಲಕ್ಷ ರೂ. ಪರಿಹಾರವನ್ನು ಹಂತ ಹಂತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಳೆಯಿಂದ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸಮಸ್ಯೆಯಾಗಿದೆ. ಹೆದ್ದಾರಿಯ ಹಲವೆಡೆ ಕಾಲುವೆ ಮುಚ್ಚಿರುವುದರಿಂದ ಈ ಸಮಸ್ಯೆಯಾಗಿದೆ. ಕಾಲುವೆ ತೆರವುಗೊಳಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಅವರು ಕಾಲುವೆ ತೆರವುಗೊಳಿಸುವವರೆಗೂ ನಾವು ಕಾಯುವುದಿಲ್ಲ, ರಾಜ್ಯ ಸರ್ಕಾರವೇ ತೆರವುಗೊಳಿಸಲಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. 

ಮಳೆಯಿಂದ ರೇಷ್ಮೆ ರೀಲರ್ಸ್ ಗೆ ಆಗಿರುವ ನಷ್ಟವನ್ನು ಸರ್ಕಾರವೇ ಭರಿಸಲಿದೆ. ಸಂಕಷ್ಟದಲ್ಲಿರುವವರಿಗೆ ಶೀಘ್ರದಲ್ಲೇ ತಾತ್ಕಾಲಿಕ ಪರಿಹಾರ ಒದಗಿಸಲಾಗುವುದು, ರಾಜ್ಯ ಸರ್ಕಾರದ ವತಿಯಿಂದ ಪಡಿತರ ಕಿಟ್ ವಿತರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

SCROLL FOR NEXT