ರಾಜ್ಯ

ಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ

Srinivasamurthy VN

ಬೆಂಗಳೂರು: ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ್ದು, ಈ ಸಂಬಂಧ ದಾಖಲಾಗಿದ್ದ ಅಂಜುಮಾನ್ ಇಸ್ಲಾಂ ಮನವಿಯನ್ನು ತಿರಸ್ಕರಿಸಿದೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ(Chamrajpet Maidan) ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್(Supreme Court) ಆದೇಶ ನೀಡಿದೆ. ಅದರಂತೆಯೇ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೂ(Hubli Idgah Maidan) ತೀರ್ಪು ನೀಡಿ ಎಂದು ಅಂಜುಮಾನ್ ಇಸ್ಲಾಂ ಸಮಿತಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಹೀಗಾಗಿ ರಾತ್ರಿ 10 ಗಂಟೆಗೆ ನ್ಯಾ.ಅಶೋಕ್.ಎಸ್ ಕಿಣಗಿಯವರ ಕಚೇರಿಯಲ್ಲಿ ವಿಚಾರಣೆ ನಡೆಸಿತ್ತು. ವಾದ ವಿವಾದ ಆಲಿಸಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನ (ಈ ಹಿಂದಿನ ಈದ್ಗಾ ಮೈದಾನ)ದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಸಮ್ಮತಿ ನೀಡಿದೆ. ಅಂತೆಯೇ ಅಂಜುಮಾನ್ ಇಸ್ಲಾಂ ಮನವಿ ತಿರಸ್ಕರಿಸಿ ನಾಳಿನ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು ಅರ್ಜಿದಾರರ ಪರ ವಕೀಲರು ಸುಪ್ರೀಂಕೋರ್ಟ್​ ಆದೇಶ ಉಲ್ಲೇಖಿಸಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿಗೆ ಆದೇಶಿಸಿದೆ. ಇದೇ ಆದೇಶವನ್ನು ಹುಬ್ಬಳ್ಳಿ ಈದ್ಗಾ ಕೇಸ್​ಗೂ ಅನ್ವಯಿಸಲು ಮನವಿ ಮಾಡಿದ್ದಾರೆ. ಹುಬ್ಬಳ್ಳಿ ಈದ್ಗಾ ಮೈದಾನ ನಮ್ಮದೆಂದು ನಾವು ಹೇಳುತ್ತಿಲ್ಲ, ಈಗಿನ ಪರಿಸ್ಥಿತಿಯಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು. ಪಾಲಿಕೆಯೇ ಮಾಲೀಕರಾದರೂ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಅಂಜುಮಾನ್ ಇಸ್ಲಾಂ ಪರ ವಕೀಲರು ವಾದಮಂಡಿಸಿದರು.

ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲ ಎಎಜಿ ಧ್ಯಾನ್ ಚಿನ್ನಪ್ಪ ಈ ಸಂಬಂಧ ಆಕ್ಷೇಪ ಸಲ್ಲಿಸಿದ್ದು, ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ವಿವಾದವಿದೆ. ಆದರೆ ಹುಬ್ಬಳ್ಳಿ ಈದ್ಗಾ ಮೈದಾನದ ಮಾಲೀಕತ್ವದ ವಿವಾದವಿಲ್ಲ. ಹೀಗಾಗಿ ಎರಡೂ ಪ್ರಕರಣಗಳೂ ಪ್ರತ್ಯೇಕವಾಗಿವೆ ಎಂದರು. ವರ್ಷಕ್ಕೆ ಎರಡು ಬಾರಿ ನಮಾಜ್ ವೇಳೆ ಅಡ್ಡಿಪಡಿಸಿಲ್ಲ. ಆಗ ಅಡ್ಡಿಪಡಿಸಿದ್ದರೆ ಆಗ ಅಂಜುಮಾನ್ ಅರ್ಜಿ ಸಲ್ಲಿಸಬಹುದಿತ್ತು. ಹೀಗಾಗಿ ಅಂಜುಮಾನ್ ಸಲ್ಲಿಸಿದ್ದ ಅರ್ಜಿ ಊರ್ಜಿತವಲ್ಲ. ಸುಪ್ರೀಂಕೋರ್ಟ್ ಆದೇಶಕ್ಕೂ ಹುಬ್ಬಳ್ಳಿ ಮೈದಾನಕ್ಕೂ ಸಂಬಂಧವಿಲ್ಲ. ಸ್ವಾಧೀನ ಸಂಬಂಧಿಸಿದಂತೆ ವಿವಾದವಿದ್ದಿದ್ದರಿಂದ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಹುಬ್ಬಳಿ ಮೈದಾನದ ಸಂಬಂಧ ಯಾವುದೇ ವಿವಾದ ಇಲ್ಲ. ಗಣೇಶೋತ್ಸವಕ್ಕೂ ಷರತ್ತುಗಳನ್ನು ವಿಧಿಸಲಾಗಿದೆ. ಶಾಶ್ವತ ಕಟ್ಟಡ ಕಟ್ಟುವಂತಿಲ್ಲವೆಂದು ಷರತ್ತಿದೆ. ಕೇವಲ 30X30 ವಿಸ್ತೀರ್ಣದಲ್ಲಿ ಮಾತ್ರ ಪೆಂಡಾಲ್ ಹಾಕಲಾಗುತ್ತಿದೆ. ಹೀಗಾಗಿ ಕೇವಲ 30 ಬೈ 30 ರಲ್ಲಿ ಮಾತ್ರ ಪೆಂಡಾಲ್ ಹಾಕಲಾಗುತ್ತಿದೆ. ಗಣೇಶ ಉತ್ಸವ ಒಂದು ಧರ್ಮದ್ದಲ್ಲ ಎಲ್ಲರೂ ಭಾಗವಹಿಸಬಹುದು ಎಂದು ಎಎಜಿ​ ಧ್ಯಾನ್ ಚಿನ್ನಪ್ಪ ವಾದಿಸಿದ್ದಾರೆ.

ಈ ಹಿಂದೆಯೇ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ಅಂಜುಮಾನ್ ಇಸ್ಲಾಂ ವಿರುದ್ಧ ಆದೇಶ ನೀಡಿದೆ. ಯಾವುದೇ ಕಟ್ಟಡ ಕಟ್ಟದಂತೆ ನಿರ್ಬಂಧ ವಿಧಿಸಿದೆ. ಜಾತ್ರೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಬಳಸಬಹುದೆಂದು ಹೇಳಿದೆ. ಅಂಜುಮಾನ್ ಇಸ್ಲಾಂ ಸಲ್ಲಿಸಿದ್ದ ಮೇಲ್ಮನವಿಯೂ ವಜಾಗೊಂಡಿದೆ. ಮೈದಾನವನ್ನು ಅಂಜುಮಾನ್ ಇಸ್ಲಾಂಗೆ ಲೀಸ್​ಗೆ ನೀಡಿಲ್ಲ. ನಮಾಜ್ ಮಾಡಲು ಮಾತ್ರ ಲೈಸೆನ್ಸ್ ನೀಡಲಾಗಿತ್ತು ಎಂದು ರಾಜ್ಯ ಸರ್ಕಾರದ ಪರ ಎಎಜಿ​ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ವರ್ಷದಲ್ಲಿ 2 ಬಾರಿ ಮಾತ್ರ ನಮಾಜ್ ಮಾಡಲು ಲೈಸೆನ್ಸ್ ನೀಡಲಾಗಿದೆ. ಇದನ್ನು ಹೊರತುಪಡಿಸಿ ಅಂಜುಮಾನ್ ಸಂಸ್ಥೆಗೆ ಯಾವುದೇ ಹಕ್ಕಿಲ್ಲ. ಅಂಜುಮಾನ್ ಇಸ್ಲಾಂ ಬಳಿ ಭೂಮಿ ಎಂದಿಗೂ ಸ್ವಾಧೀನದಲ್ಲಿರಲಿಲ್ಲ. ಹೀಗಾಗಿ ಭೂಮಿಯನ್ನು ನಮಗೆ ಬೇಕಾದಂತೆ ಬಳಕೆ ಮಾಡಬಹುದು. ಇದಕ್ಕೆ ಹು-ಧಾ ನಗರಪಾಲಿಕೆಗೆ ಎಲ್ಲಾ ಅಧಿಕಾರವಿದೆ ಎಂದರು.

ವಾದ-ಪ್ರತಿವಾದ ಆಲಿಸಿ ನ್ಯಾ.ಅಶೋಕ್ ತೀರ್ಪು
ಹು-ಧಾ ಪಾಲಿಕೆ ಆಯುಕ್ತರ ಆದೇಶ ಪ್ರಶ್ನಿಸಿ ಅಂಜುಮಾನ್ ಇಸ್ಲಾಂ ರಿಟ್ ಸಲ್ಲಿಸಿತ್ತು. ಹುಬ್ಬಳ್ಳಿ ಮೈದಾನ ಪಾಲಿಕೆಯದ್ದೆಂಬುದು ನಿರ್ವಿವಾದ. 1973ರಲ್ಲಿ ಸಿವಿಲ್ ಕೋರ್ಟ್ ಪಾಲಿಕೆ ಪರವಾಗಿ ಡಿಕ್ರಿ ನೀಡಿದೆ. 1992ರಲ್ಲಿ ವಕ್ಫ್ ಬೋರ್ಡ್, ಅಂಜುಮಾನ್ ಮೇಲ್ಮನವಿ ವಜಾಗೊಂಡಿದೆ. ಸುಪ್ರೀಂಕೋರ್ಟ್​ನಲ್ಲೂ ಸಿವಿಲ್ ಅಪೀಲ್ ವಜಾಗೊಂಡಿದೆ. ಪಾಲಿಕೆ ಮೈದಾನದ ಮಾಲೀಕನೆಂಬುದು ನಿರ್ವಿವಾದ. ರಂಜಾನ್, ಬಕ್ರೀದ್ ವೇಳೆ ನಮಾಜ್​ಗೆ ಲೈಸೆನ್ಸ್ ನೀಡಲಾಗಿದೆ. ಹು-ಧಾ ಪಾಲಿಕೆ ಮೈದಾನದ ಮೇಲೆ ಹಕ್ಕುಗಳನ್ನು ಹೊಂದಿದೆ. ಕೆಲ ಸಂಘಟನೆಗಳು ಗಣೇಶೋತ್ಸವಕ್ಕೆ ಪಾಲಿಕೆಗೆ ಅರ್ಜಿ ಸಲ್ಲಿಸಿವೆ. ಗಣೇಶೋತ್ಸವಕ್ಕೆ ಅನುಮತಿ ನೀಡಬಹುದೇ ಎಂಬ ಬಗ್ಗೆ ಸಮಿತಿ ರಚಿಸಿತ್ತು. ಮೇಯರ್ ರಚಿಸಿದ್ದ ಸಮಿತಿ ಗಣೇಶೋತ್ಸವಕ್ಕೆ ಅನುಮತಿ ನೀಡಿದೆ.

ಮೈದಾನದಲ್ಲಿ ಗಣೇಶೋತ್ಸವಕ್ಕೆ ಅಂಜುಮಾನ್ ಇಸ್ಲಾಂ ಆಕ್ಷೇಪಿಸಿದೆ. ಈದ್ಗಾ ಮೈದಾನವೆಂದು ಅಂಜುಮನ್ ಇಸ್ಲಾಂ ವಾದಿಸಿದೆ. ಪ್ರಾರ್ಥನೆಗೆ ಬಳಸುವ ಮೈದಾನವನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ಅಂಜುಮಾನ್ ಇಸ್ಲಾಂ ಪರ ವಕೀಲರು ವಾದ ಮಂಡಿಸಿದ್ದಾರೆ. ಪಾರ್ಕಿಂಗ್ ಮತ್ತಿತರ ಚಟುವಟಿಕೆಗೆ ಮೈದಾನವನ್ನು ಬಳಸಲಾಗಿದೆ. ಪ್ರಾರ್ಥನೆಯ ಸ್ಥಳವೆಂದು ಈ ಮೈದಾನವನ್ನು ಗುರುತಿಸಲಾಗಿಲ್ಲ. ಸುಪ್ರೀಂಕೋರ್ಟ್ ಇಂದು ನೀಡಿರುವ ಮಧ್ಯಂತರ ಆದೇಶ ಉಲ್ಲೇಖಿಸಲಾಗಿದೆ. ಸುಪ್ರೀಂಕೋರ್ಟ್ ನ ಮುಂದೆ ಮೈದಾನ ಮಾಲೀಕತ್ವ ವಿವಾದವಿತ್ತು. ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಈ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ. ಹೀಗಾಗಿ ಅಂಜುಮಾನ್ ಇಸ್ಲಾಂ ಮನವಿ ತಿರಸ್ಕರಿಸಿ ನಾಳಿನ ಗಣೇಶೋತ್ಸವಕ್ಕೆ ನ್ಯಾ.ಅಶೋಕ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

SCROLL FOR NEXT