ರಾಜ್ಯ

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್; ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚನೆ 

Srinivas Rao BV

ನವದೆಹಲಿ: ಚಾಮರಾಜಪೇಟೆಯ ವಿವಾದಿತ ಮೈದಾನದಲ್ಲಿ 2 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದ್ದು, ಗಣೇಶೋತ್ಸವಕ್ಕೆ ಅನುಮತಿ ನಿರಾಕರಿಸಿದೆ. 

ಈದ್ಗಾ ಮೈದಾನವೆಂದು ವಕ್ಫ್ ಬೋರ್ಡ್ ಪ್ರತಿಪಾದಿಸುತ್ತಿದ್ದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದನ್ನು ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಪ್ರತಿಯಾಗಿ ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಮೈದಾನದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ರಾಜ್ಯ ಸರ್ಕಾರವೇ ಕಾನೂನು ಸುವ್ಯವಸ್ಥೆಯನ್ನು ಗಮನಿಸುತ್ತದೆ. ಆದ್ದರಿಂದ ಗಣೇಶೋತ್ಸವಕ್ಕೆ ಅನುಮತಿ ನೀಡಬೆಕು ಎಂದು ತುಷಾರ್ ಮೆಹ್ತಾ ಕೋರ್ಟ್ ಗೆ ಮನವಿ ಮಾಡಿದರು. 

ಆದರೆ ವಕ್ಫ್ ಬೋರ್ಡ್ ಪರ ಕಪಿಲ್ ಸಿಬಲ್, ದುಷ್ಯಂತ್ ದವೆ ಮಂಡಿಸಿದ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯಪೀಠ, ಇನ್ನು 2 ದಿನಗಳ ಕಾಲ ಮೈದಾನದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು, ವಿಷಯವನ್ನು ವಾಪಸ್ ಹೈಕೋರ್ಟ್ ನಲ್ಲೇ ಇತ್ಯರ್ಥಪಡಿಸಿಕೊಳ್ಳಬೇಕು ಎಂಬ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ. 

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠವು ಮಂಗಳವಾರ ಈ ವಿಷಯವಾಗಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ನಂತರ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್ ಎಸ್ ಓಕಾ ಮತ್ತು ಎಂಎಂ ಸುಂದ್ರೇಶ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಿದ್ದರು.

ಈ ಹಿಂದೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಅನುಮತಿ ನೀಡಬಹುದು ಎಂದು ಹೇಳಿದ್ದ ಹೈಕೋರ್ಟ್ ಆಗಸ್ಟ್ 31 ರಿಂದ ನಿರ್ದಿಷ್ಟ ಅವಧಿಗೆ ಮಾತ್ರ ಅನುಮತಿ ನೀಡಿತ್ತು. 

SCROLL FOR NEXT