ರಾಜ್ಯ

ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತ ಮತದಾರರನ್ನು ಕೈಬಿಟ್ಟಿಲ್ಲ; ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ತನಿಖೆಗೆ ಸೂಚನೆ: ಬೊಮ್ಮಾಯಿ

Sumana Upadhyaya

ಬೆಂಗಳೂರು: ಮತದಾರರ ಗುರುತಿನ ಚೀಟಿ ಹಗರಣದ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಿದೆ.ಮತದಾರರ ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಇತ್ಯಾದಿ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗ ನೇಮಿಸಿರುವ ಅಧಿಕಾರಿಗಳ ನೇತೃತ್ವದಿಂದಲೇ ಆಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ನೇಮಿಸಿದ ಅಧಿಕಾರಿಗಳು ವೋಟರ್ ಐಡಿ ಹಗರಣದ ಬಗ್ಗೆ ತನಿಖೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಬೆಳಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಎರಡು ಅಂಶಗಳು ಮುಖ್ಯವಾಗಿದೆ. ಅನಧಿಕೃತವಾಗಿ ಮತದಾರರ ಹೆಸರು ಸೇರ್ಪಡೆಯಾಗಿದೆ, ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದರೆ ಒಂದು ಕಡೆ ತೆಗೆದುಹಾಕುವ ಕೆಲಸ ಚುನಾವಣಾ ಆಯೋಗ ಮಾಡುತ್ತದೆ. ಇನ್ನೊಂದು, ಅಧಿಕಾರಿಗಳು ಬಂದಾಗ ಮನೆಯಲ್ಲಿ ಮತದಾರರು ಇಲ್ಲದೆ ಸಮಸ್ಯೆಗಳಾಗಿರುತ್ತವೆ. ಪ್ರತಿಯೊಬ್ಬ ಅರ್ಹ ಮತದಾರರಿಗೆ ಮತದಾನದ ಹಕ್ಕು ಇರುತ್ತದೆ. ಅಧಿಕೃತ ಮತದಾರರಿಗೆ ಮತದಾನದ ಹಕ್ಕು ಮತ್ತು ಅನಧಿಕೃತ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಎರಡೂ ಕೆಲಸ ಎಲೆಕ್ಷನ್ ಕಮಿಷನ್ ಮಾಡುತ್ತದೆ ಎಂದರು.

ರಾಜ್ಯಾದ್ಯಂತ ಅನಧಿಕೃತ ಸಮೀಕ್ಷೆಗಳು ನಡೆದು ಅಲ್ಪಸಂಖ್ಯಾತರ  ಮತದಾರರನ್ನು ಡಿಲೀಟ್ ಮಾಡಲಾಗುತ್ತಿದೆ ಎನ್ನುವುದು ಸುಳ್ಳು.ಈಗಾಗಲೇ ರಾಜ್ಯ ಚುನಾವಣೆ ಆಯೋಗ ಈ ಬಗ್ಗೆ ಗಮನ ಹರಿಸಿದೆ. ಚುನಾವಣಾ ಆಯೋಗದ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತದೆ. ಈ ರೀತಿಯ ದೂರುಗಳು ಬಂದಲ್ಲಿ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು ಎಂದರು.

ನಿಜವಾದ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತ್ತು ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆಯುವ ಪ್ರತಿ ದೂರನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದರು. 

ಕನ್ನಡಿಗ ವಿದ್ಯಾರ್ಥಿ ಮೇಲೆ ಹಲ್ಲೆ, ತನಿಖೆಗೆ ಆದೇಶ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ಹಲ್ಲೆಯಾಗಿರುವ ಬಗ್ಗೆ ತನಿಖೆ ಕೈಗೊಳ್ಳಲು ಪೋಲಿಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಪ್ರಕರಣದ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ  ಪೊಲೀಸರು ಕನ್ನಡಿಗರ ಮೇಲೆ ಹಲ್ಲೆ ಮಾಡಿಲ್ಲ ಎಂದು ಕೂಡ ಸಿಎಂ ಸ್ಪಷ್ಟಪಡಿಸಿದ್ದಾರೆ. ಸತ್ಯಾಸತ್ಯತೆಯನ್ನು ತಿಳಿದುಕೊಂಡು ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಡು ಹೇಳಿದ್ದಾರೆ. 

SCROLL FOR NEXT