ರಾಜ್ಯ

ರಾಜ್ಯದ ದೇವಾಲಯಗಳಲ್ಲಿ ಸೇವಾ ಕಾರ್ಯಗಳಿಗೆ ಬಳಸುವ ಹೆಸರು ಬದಲಾವಣೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

Nagaraja AB

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ "ದೀವಟಿಗೆ ಸಲಾಂ” “ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಿ ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನು  ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಧಾರ್ಮಿಕ , ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ, ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತ್ರುತ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ “ದೀವಟಿಗೆ ಸಲಾಂ”  ಪದದ ಬದಲಿಗೆ “ದೀವಟಿಗೆ ನಮಸ್ಕಾರ”, “ಸಲಾಂ ಆರತಿ” ಬದಲಾಗಿ “ಆರತಿ ನಮಸ್ಕಾರ” ಹಾಗೂ ʼಸಲಾಂ ಮಂಗಳಾರತಿ” ಪದದ ಬದಲಿಗೆ  “ಮಂಗಳಾರತಿ ನಮಸ್ಕಾರ” ಎಂದು ಹೆಸರು ಬದಲಾಯಿಸಿ, ಸೇವಾ ಕಾರ್ಯ  ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 

ಸಲಾಂ ಆರತಿ ಪೂಜೆ ರದ್ದುಪಡಿಸಲಾಗಿಲ್ಲ: ಕೇವಲ ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮತ್ತು ಪೂಜೆಗಳನ್ನು ಮುಂದುವರೆಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 

ದೇವಸ್ಥಾನಗಳ ಆಡಿಟ್‌ ಹೊಣೆಯನ್ನ ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿಲ್ಲ: ದೇವಸ್ಥಾನಗಳು ತಮ್ಮ ಆಡಿಟ್‌ ವರದಿಯನ್ನ ಸರ್ಕಾರಿ ಲೆಕ್ಕಪತ್ರ ಇಲಾಖೆಯಿಂದಲೇ ಆಡಿಟ್‌ ಮಾಡಿಸಿ ವರದಿ ಸಲ್ಲಿಸಿದ್ದಾರೆ. ಖಾಸಗಿ ಸಂಸ್ಥೆಗಳಿಗೆ ಆಡಿಟ್‌ ಹೊಣೆಯನ್ನು ನೀಡಲಾಗಿದೆ ಎನ್ನುವ ಕೆಲವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಚಿವರು ತಿಳಿಸಿದರು. 

SCROLL FOR NEXT