ರಾಜ್ಯ

ಮತದಾರರ ಮಾಹಿತಿ ಕಳವು ಪ್ರಕರಣ: ತಾಂತ್ರಿಕ ದಾಖಲೆಗಳ ಪರಿಶೀಲನೆಗೆ ಪೊಲೀಸರು ಮುಂದು!

Manjula VN

ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಲ್ಲಿಸಿರುವ ತಾಂತ್ರಿಕ ದಾಖಲೆಗಳ ಪರಿಶೀಲಿಸಲು ಹಲಸೂರು ಗೇಟ್ ಪೊಲೀಸರು ಮುಂದಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲು ಸೇರಿರುವ ಬಿಬಿಎಂಪಿ ಕಂದಾಯ ಅಧಿಕಾರಿಗಳಿಗೆ ಸೆಕ್ಷನ್ 439ರ ಅಡಿಯಲ್ಲಿ ಜಾಮೀನು ಪಡೆಯುವುದು ಕಷ್ಟವಾಗಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡದಲ್ಲಿರುವ ಅಧಿಕಾರಿಯೊಬ್ಬರು ಮಾತನಾಡಿ, ಶುಕ್ರವಾರ ಜಾಮೀನು ಆದೇಶದ ವಿಚಾರಣೆ ನಡೆಯುತ್ತಿದ್ದಾಗ ಹಲಸೂರು ಗೇಟ್ ಪೊಲೀಸ್ ಸ್ಥಳದಲ್ಲಿರಲಿಲ್ಲ. ಅಮಾನತುಗೊಂಡಿರುವ ಡಿಸಿ ವಿರುದ್ಧ ಆದೇಶ ಹೊರಬಿದ್ದ ಬಳಿಕ ಅವರ ಬೆಂಬಲಿತ ತಂಡ ಸ್ಥಳದಿಂದ ಹೊರನಡೆದಿತ್ತು ಎಂದು ಹೇಳಿದ್ದಾರೆ.

ಜೈಲು ಸೇರಿರುವ ಅಧಿಕಾರಿಗಳಿಗೆ ಐಪಿಸಿ ಸೆಕ್ಷನ್ 438 ರ ಅಡಿಯಲ್ಲಿ ನಿರೀಕ್ಷಣಾ ಜಾಮೀನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಆದರೀಗ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬಿಬಿಎಂಪಿ ಆಡಳಿತ ಆಯುಕ್ತ ಎಸ್.ರಂಗಪ್ಪ ಅವರು ಸಲ್ಲಿಸಿರುವ ಸಾಕ್ಷ್ಯಗಳ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

SCROLL FOR NEXT