ರಾಜ್ಯ

ಸೈನಿಕರ ಕುಟುಂಬದವರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ದ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು : ದೇಶಕ್ಕಾಗಿ ಮಡಿದ ಸೈನಿಕರ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ, ಸಹಕಾರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. 

ಅವರು ಇಂದು ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್ ಆಯೋಜಿಸಿದ್ದ ಬಾಂಗ್ಲಾದೇಶ ವಿಮೋಚನಾ ದಿನದ ವಿಜಯ ದಿವಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಬಾಂಗ್ಲಾ ವಿಮೋಚನೆ, ಕಾರ್ಗಿಲ್ ಸೇರಿದಂತೆ ಅನೇಕ ಯುದ್ಧಗಳಲ್ಲಿ ಜಯಗಳಿಸಿದೆ. ಅದರಲ್ಲಿ ಕರ್ನಾಟಕದ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದಾರೆ. ಅದರ ಸ್ಮರಣಾರ್ಥವಾಗಿ ವಿಜಯ ದಿವಸ ಆಚರಣೆ ಮಾಡಲಾಗುತ್ತದೆ. 

ರಕ್ಷಣಾ ಪಡೆಗಳ ಸೇವೆ ಅತ್ಯಂತ ಶ್ರೇಷ್ಠ ಸೇವೆ. ಅಲ್ಲಿಗೆ ಸೇರುವ ಮುನ್ನವೇ ಎಲ್ಲಾ ತ್ಯಾಗಕ್ಕೂ ಸಿದ್ದರಾಗಿರಬೇಕು ಎಂದು ಮನಗಂಡು ಸೇರುತ್ತೇವೆ. ದೇಶದ ರಕ್ಷಣೆ ಹಾಗೂ ಅದರ ಜನರಿಗಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ದೇಶಕ್ಕೆ ವಿಜಯ ಪ್ರಾಪ್ತಿ ಯಾಗಿದ್ದನ್ನು ನೋಡಲೂ ಅವರಿರುವುದಿಲ್ಲ. ಮಾನವೀಯತೆಯ ಅತ್ಯಂತ ಶ್ರೇಷ್ಠ ಗುಣವನ್ನು ಹೊಂದಿರುವ ಸೇವೆ ಇದು ಎಂದರು. 

ಮಾನವನ ಹೊಂದಾಣಿಕೆಯ ಗುಣ ಅತ್ಯಂತ ಶ್ರೇಷ್ಠವಾದುದು. ಪ್ರತಿಕೂಲ ವಾತಾವರಣದಲ್ಲಿಯೂ ಬದುಕಿ, ಸೈನಿಕರು ಹೋರಾಡುತ್ತಾರೆ. ದೇಶವನ್ನು ವಿಜಯಪಥದತ್ತ ನಡೆಸಿ, ಪ್ರಾಣತ್ಯಾಗ ಮಾಡಿದ ಹಾಗೂ ಗಾಯಗೊಂಡ ಎಲ್ಲ ಯೋಧರಿಗೂ ಮನದಾಳದ ನಮನ ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಅವರ ಅಪ್ರತಿಮ ತ್ಯಾಗ ದೇಶಕ್ಕೆ ವಿಜಯ ತಂದು ಸುರಕ್ಷಿತವಾಗಿ ಇಟ್ಟಿದೆ. ಸಾಮಾನ್ಯ ನಾಗರಿಕರು ಶಾಂತಿಯಿಂದಿರಲು ಸಾಧ್ಯವಾಗಿದೆ ಎಂದರು.

ಯಾವುದೇ ಸಮಯದಲ್ಲಿ ಯುದ್ಧಕ್ಕೆ ತಯಾರಿರಲು ಅತ್ಯಂತ ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಅಭ್ಯಾಸವನ್ನು ಬೇಡುವ ರಕ್ಷಣಾ ಪಡೆ ಮಾನಸಿಕವಾಗಿಯೂ ಸನ್ನದ್ಧರಾಗಿರಬೇಕು. ಆಧುನಿಕ ಕಾಲದಲ್ಲಿ ತಮ್ಮ ಸರಹದ್ದನ್ನು ವಿಸ್ತರಿಸಲು ಪ್ರಯತ್ನಿಸುತ್ತವೆ. ಆದರೆ ಈ ಕಾಲದಲ್ಲಿ ಅದಕ್ಕೆ ಅವಕಾಶವಿಲ್ಲ. ಆದರೂ ಸಾಹಸವನ್ನು ಮಾಡುತ್ತಿರುತ್ತಾರೆ. ಕೆಲವು ಹಿಂದಿನ ಅನುಭವದಿಂದ ಸೈನಿಕರು ಗಡಿಯಲ್ಲಿ ಸದಾ ಸನ್ನದ್ಧರಾಗಿದ್ದಾರೆ. ಯಾವುದೇ ದೇಶ ಒಂದಿಚು ಒಳಗೆ ಬಂದರೂ ಹಿಮ್ಮೆಟ್ಟಿಸಿ ಸೋಲಿಸುವ ಶಕ್ತಿ ನಮ್ಮ ಸೈನಿಕರಿಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕಿದೆ ಎಂದರು. 

ರಕ್ಷಣಾ ಪಡೆಗಳಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದ್ದು, ನಾವು ಪ್ರಗತಿಯತ್ತ ಸಾಗಬೇಕು. ನಾಗರಿಕರಾಗಿ ದೇಶವಾಸಿಗಳಿಗೆ ಉತ್ತಮ ಜೀವನ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು. ಇಂದು ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಎಂ.ಬಿ ಶಶಿಧರ್ ಭಾಗವಹಿಸಿದ್ದರು.

SCROLL FOR NEXT