ರಾಜ್ಯ

ರಾಜ್ಯದಲ್ಲಿ ಡೆಂಘೀ, ಝಿಕಾ ವೈರಸ್ ಕುರಿತು ಹೆಚ್ಚಿದ ಆತಂಕ: ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ

Manjula VN

ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಹಾಗೂ ಝಿಕಾ ವೈರಸ್ ಕುರಿತು ಆತಂಕ ಹೆಚ್ಚಾಗಿದ್ದು, ಈ ಸಂಬಂಧ ಎಚ್ಚರಿಕೆ ವಹಿಸುವ ಹಾಗೂ ಹರಡುವಿಕೆ ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆ ಕೆಲವು ಕ್ರಮಗಳನ್ನು ಗುರುವಾರ ಬಿಡುಗಡೆ ಮಾಡಿದೆ.

ಸೊಳ್ಳೆ ಪರದೆಯ ಕೆಳಗೆ ಮಲಗುವುದು, ಸೊಳ್ಳೆ ನಿವಾರಕಗಳನ್ನು ಬಳಸುವುದು ಮತ್ತು ಆದಷ್ಟು ಮುಚ್ಚುವ ಬಟ್ಟೆಗಳನ್ನು ಧರಿಸುವುದು ಹಾಗೂ ಹೆಚ್ಚು ಸೋಂಕಿರುವ ಪ್ರದೇಶಗಳಿಗೆ ಪ್ರಯಾಣವನ್ನು ಮುಂದೂಡುವಂತೆಯೂ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಪ್ರಸಕ್ತ ವಾರ ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಕಾಣಿಸಿಕೊಂಡಿತ್ತು. ಡೆಂಘೀ ಜ್ವರಕ್ಕೆ ಕಾರಣವಾಗುವ ಈಡಿಸ್ ಈಜಿಪ್ಟ್ ಜಾತಿಯ ಸೊಳ್ಳೆ ಕಚ್ಚುವುದರಿಂದಲೇ ಝಿಕಾ ವೈರಸ್ ಸೋಂಕು ಕೂಡ ಹರಡುತ್ತದೆ.

ಸೊಳ್ಳೆ ಹೆಚ್ಚಳದಿಂದ ಡೆಂಘೀ ಉಲ್ಬಣವಾಗಿದ್ದು, ಇದೇ ಸೊಳ್ಳೆಗಳಿಂದ ಝಿಕಾ ವೈರಸ್ ಸೋಂಕು ಕೂಡ ತೀವ್ರವಾಗಿ ವ್ಯಾಪಿಸುವ ಆತಂಕ ಹೆಚ್ಚಳವಾಗಿದೆ.

ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯೇ ಡೆಂಘೀ ಜ್ವರ ಹರಡಲು ಕಾರಣ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ ಇದಾಗಿದ್ದು, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಜನರು ಮನೆ ಸುತ್ತಮುತ್ತಲೂ ನೀರು, ತ್ಯಾಜ್ಯ ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.

ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವುದು, ಗಂಟು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ-ಕೈ ನೋವು, ಅತಿಸಾರ ರೀತಿಯ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT