ರಾಜ್ಯ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಕುರಿತ ಹೇಳಿಕೆ: ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ

Ramyashree GN

ಮಂಗಳೂರು: ‘ಮತದಾರರ ದತ್ತಾಂಶ ಕಳವು ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ರಾಜ್ಯ ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಸ್ಫೋಟ ಮಾಡಿಸಿದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಡಿರುವ ಆರೋಪ, ರಾಜ್ಯ ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದೀಗ ಡಿಕೆ ಶಿವಕುಮಾರ್ ಅವರ ಪರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬ್ಯಾಟ್ ಬೀಸಿದ್ದಾರೆ.

'ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೊರತು, ಭಯೋತ್ಪಾದನೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆಯೇ' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರಿಗೆ  ಇಂತಹ ಹೇಳಿಕೆಗಳೇ ಬೇಕಾಗಿರುವುದು. ಅವರು ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಮನಸ್ಥಿತಿ ಹೊಂದಿದೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಭತ್ತು ವರ್ಷಗಳಾದವು. ದೇಶದಲ್ಲಿ ಈಗಲೂ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದ್ದರೆ ಹತ್ತಿಕ್ಕಲಿ. ಡಬಲ್ ಎಂಜಿನ್ ಸರ್ಕಾರವಿದೆ. ಅವರಿಗೆ ಅಧಿಕಾರ ಕೊಟ್ಟಿದ್ದೇಕೆ ಮತ್ತೆ. ಬರೀ ಜನರನ್ನು ಪ್ರಚೋದಿಸಿ ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಡುವುದಕ್ಕಲ್ಲ ಎಂದರು.

ಕರಾವಳಿಯಲ್ಲಿ ಮತೀಯ ಗೂಂಡಾಗಿರಿಯ ಸುಮಾರು ಏಳೆಂಟು ಪ್ರಕರಣಗಳು ನಡೆದಿವೆ. ಇವುಗಳನ್ನು ನಾನು ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತಗೆದುಕೊಳ್ಳಲಿ' ಎಂದು ಒತ್ತಾಯಿಸಿದರು.

ಮತೀಯ ಗೂಂಡಾಗಿರಿ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದನ್ನು ಪ್ರೋತ್ಸಾಹಿಸುವ ಹೇಳಿಕೆ ನೀಡಿದ್ದರು. ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡಿದರೆ ಮತ್ತೇನಾಗುತ್ತದೆ. ಅವರಿಗೆ ಕಾನೂನು ಗೊತ್ತಿದೆಯೋ ಇಲ್ಲವೊ ಎಂದು ನನಗೆ ಅರಿವಿಲ್ಲ. ಸಂವಿಧಾನದಲ್ಲಿ ಇದಕ್ಕೆ ಎಲ್ಲಾದರೂ ಅವಕಾಶವಿದೆಯೇ? ಪೊಲೀಸರು ಇರುವುದು ಏಕೆ ಮತ್ತೆ' ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್ ಹೇಳಿದ್ದಿಷ್ಟು...

ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಸ್ಫೋಟ ಪ್ರಕರಣವನ್ನು ಮಾಧ್ಯಮ ಸಂವಾದದಲ್ಲಿ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್‌, ‘ಉಗ್ರ ಎಲ್ಲಿಂದ ಬಂದು ಸ್ಫೋಟ ಮಾಡಿದ? ಪೊಲೀಸ್‌ ಮಹಾನಿರ್ದೇಶಕರು ಆತುರದಲ್ಲಿ ಭಯೋತ್ಪಾದಕ ಕೃತ್ಯವೆಂದರು’ ಎಂದು ದೂರಿದರು.

ತನಿಖೆಗೂ ಮೊದಲೇ ಅಧಿಕಾರಿಗಳು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಹಿಂದೆ ಯಾವ ಉಗ್ರನಿದ್ದಾನೆ. ಯಾವ ಸಂಘಟನೆ ಇದೆ. ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯಿತು.  ಅವರು, ‘ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ’ ಎಂದರು. ‘ಇಲ್ಲಿ ದೆಹಲಿ, ಮುಂಬೈ, ಜಮ್ಮುಕಾಶ್ಮೀರ, ಪುಲ್ವಾಮ ಥರದ ದಾಳಿ ಆಗಿಲ್ಲ‌. ಆ ಥರ ಉಗ್ರರ ದಾಳಿ ಮಂಗಳೂರಿನಲ್ಲಿ ಮಾಡಿದ್ದಾರಾ ಎಂದೂ ಪ್ರಶ್ನಿಸಿದರು.

SCROLL FOR NEXT