ರಾಜ್ಯ

ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ನಿರ್ವಹಣಾ ಪ್ರಾಧಿಕಾರ ರಚನೆ: ಸಚಿವ ಆನಂದ್ ಸಿಂಗ್

Ramyashree GN

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಧರ್ಮಸ್ಥಳ ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ಶನಿವಾರ ಹೇಳಿದ್ದಾರೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಧರ್ಮಸ್ಥಳದಲ್ಲಿ ₹ 4.80 ಕೋಟಿ ವೆಚ್ಚದಲ್ಲಿ ನವೀಕೃತ ನೇತ್ರಾವತಿ ಸ್ನಾನಘಟ್ಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ತಿಳಿಸಲಾಗಿದೆ ಎಂದರು.

ಜನರು ಸರ್ಕಾರದ ಕಾನೂನನ್ನು ಉಲ್ಲಂಘಿಸುತ್ತಾರೆ. ಆದರೆ, ಧರ್ಮಕ್ಕೆ ಸಂಬಂಧಿಸಿದ ನೀತಿ, ನಿಯಮಗಳನ್ನು ಯಾರೂ ಉಲ್ಲಂಘಿಸುವುದಿಲ್ಲ. ಧರ್ಮಸ್ಥಳ ಪ್ರವಾಸಿ ತಾಣವಲ್ಲ, ಪವಿತ್ರ ತೀರ್ಥಕ್ಷೇತ್ರವಾಗಿದೆ. ಹೀಗಾಗಿ ಈ ಪವಿತ್ರ ಕ್ಷೇತ್ರವು ಮದ್ಯದ ಅಂಗಡಿಗಳು, ಮಾಂಸಾಹಾರಿ ಹೋಟೆಲ್, ಜೂಜು ಮೊದಲಾದವುಗಳಿಂದ ಮುಕ್ತವಾಗಿರುತ್ತದೆ. ಇವುಗಳನ್ನು ತಡೆಗಟ್ಟಿ ಕ್ಷೇತ್ರದ ಪಾವಿತ್ರ್ಯ ರಕ್ಷಣೆಗಾಗಿ ಪ್ರಾಧಿಕಾರ ರಚಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯಾವುದೇ ಚಟುವಟಿಕೆಗೆ ದೇವಾಲಯದ ಸುತ್ತಮುತ್ತಲು ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.

ನೇತ್ರಾವತಿ ಸ್ನಾನಘಟ್ಟದ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗೆ ₹ 5 ಕೋಟಿ ಅನುದಾನವನ್ನು ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ (ಅನುವಂಶಿಕ ಆಡಳಿತಾಧಿಕಾರಿ) ಹಾಗೂ ರಾಜ್ಯಸಭಾ ಸದಸ್ಯ ಡಿ ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SCROLL FOR NEXT